ಮಂಗಳೂರು : ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿರುವಂತೆಯೇ ಚುನಾವಣಾ ನೀತಿ ಸಂಹಿತೆಯ ಪ್ರಕಾರ ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳ (ವ್ಯಾಟ್ಸಾಪ್, ಟ್ವಿಟರ್, ಫೇಸ್‌ಬುಕ್, ಗೂಗಲ್, ಶೇರ್ ಚಾಟ್) ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗುತ್ತಿದೆ. ಈ ಮೂಲಕ ಅಭ್ಯರ್ಥಿ ಪರ ವೈಯಕ್ತಿಕವಾಗಿ ನಡೆಸಲಾಗುವ ಪ್ರಚಾರದ ಮೇಲೂ ಚುನಾವಣಾ ಆಯೋಗ ಕಣ್ಣಿರಿಸಲಿದೆ.
ಚುನಾವಣಾ ನೀತಿ ಸಂಹಿತೆಯಡಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಅನ್ವಯವಾಗುವ ಷರತ್ತು, ಕಾನೂನು ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗಲಿದೆ. ಹಾಗಾಗಿ ಅಭ್ಯರ್ಥಿ ಪರ ನಡೆಸಲಾಗುವ ಪ್ರಚಾರಕ್ಕೆ ನೇರವಾಗಿ ಅಭ್ಯರ್ಥಿ ಹೊಣೆಯಾಗುತ್ತಾರೆ. ಆ ಪ್ರಚಾರದ ಖರ್ಚು ವೆಚ್ಚವೂ ಸಂಬಂಧಪಟ್ಟ ಅಭ್ಯರ್ಥಿಯ ಖಾತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಬಗ್ಗೆ ಗಮನಹರಿಸಬೇಕು.
ಯಾವನೇ ವ್ಯಕ್ತಿ ಯಾವುದೇ ವ್ಯಕ್ತಿಯ ಪರ ಪ್ರಚಾರ ಮಾಡಿ ಸಂದೇಶಗಳನ್ನು ರವಾನಿಸಿದಾಗ ಅದು ತನಗೆ ಗೊತ್ತಿಲ್ಲ, ನನ್ನ ಅರಿವಿಗೆ ಬಾರದೆ ಪ್ರಚಾರ ಮಾಡಿದ್ದಾರೆಂಬ ಹೇಳಿಕೆಯನ್ನು ಅಭ್ಯರ್ಥಿ ನೀಡಿದ್ದಲ್ಲಿ ಪ್ರಚಾರ ಮಾಡಿದವರೇ ಕಾನೂನಿನಡಿ ಅಪರಾಧಿಗಳಾಗುತ್ತಾರೆ. ಆಗ ಪ್ರಚಾರ ಮಾಡಿದವರ ಮೇಲೆಯೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಅಭ್ಯರ್ಥಿಯ ಅನುಮತಿ ಇಲ್ಲದೆ ವೈಯಕ್ತಿಕವಾಗಿಯೂ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಚುನಾವಣಾ ನೀತಿ ಸಂಹಿತೆಯಡಿ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ವಾಟ್ಸ್‌ಆಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಶೇರ್‌ಚಾಟ್ ಮೊದಲಾದವುಗಳಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಕೈಯ್ಯಲ್ಲಿರುವ ಸ್ಮಾರ್ಟ್ ಫೋನ್‌ಗಳ ಮೂಲಕ ಕ್ಷಿಪ್ರಗತಿಯಲ್ಲಿ ಸಂದೇಶಗಳನ್ನು ಹಂಚಿಕೊಳ್ಳಬಹುದು. ಈಗ ಇವುಗಳ ಮೂಲಕ ಮಾಡುವ ಪ್ರಚಾರವೂ ಮಾಧ್ಯಮ (ದೃಶ್ಯ ಮತ್ತು ಪತ್ರಿಕೆ, ವೆಬ್‌ಸೈಟ್) ಗಳಲ್ಲಿ ಪ್ರಸಾರವಾಗುವ ಪ್ರಚಾರ ಜಾಹೀರಾತಿನ ವ್ಯಾಪ್ತಿಗೆ ಒಳಪಡುವುದಾಗಿ ಆಯೋಗ ಸ್ಪಷ್ಟಪಡಿಸಿದೆ.
ಟಿವಿ ಚಾನೆಲ್‌ಗಳು / ಕೇಬಲ್ ನೆಟ್‌ವರ್ಕ್‌ಗಳು, ಖಾಸಗಿ ಎಫ್‌ಎಂ ಚಾನೆಲ್‌ಗಳು ಸೇರಿದಂತೆ ರೇಡಿಯೋ, ಸಿನೆಮಾ ಮಂದಿರಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೃಶ್ಯ-ಶ್ರಾವ್ಯ ಪ್ರದರ್ಶನಗಳು, ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣಾ ಜಾಹೀರಾತಿಗೆ ಅನ್ವಯವಾಗುವ ಪೂರ್ವ- ಪ್ರಮಾಣೀಕರಣವು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಬೃಹತ್ ಎಸ್‌ಎಂಎಸ್‌ಗಳು/ ಧ್ವನಿ ಸಂದೇಶಗಳಿಗೂ ಅನ್ವಯವಾಗುತ್ತದೆ. ಇಲೆಕ್ಟ್ರಾನಿಕ್ ಮಾಧ್ಯಮಗಳ ಇತರ ವಿಧಾನಗಳಿಗೆ ಅನ್ವಯವಾಗುವ ಕಾನೂನು ನಿಬಂಧನೆಗಳು ಇಂತಹ ಬೃಹತ್ ಎಸ್‌ಎಂಎಸ್‌ಗಳು/ ಧ್ವನಿ ಸಂದೇಶಗಳಿಗೂ ಅನ್ವಯಿಸುತ್ತದೆ ಎಂದವರು ವಿವರಿಸಿದರು.
ಅಭ್ಯರ್ಥಿಗೆ ತಲಾ 70 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಪೇಯ್ಡಿ ನ್ಯೂಸ್ (ಹಣ ಪಾವತಿಸಿ ಸುದ್ದಿ) ಸೇರಿದಂತೆ, ಚುನಾವಣೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳ ಬಗ್ಗೆ ನಿಗಾ ವಹಿಸಲಿದೆ. ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿರುವ ಸುದ್ದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತಂಡ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಪೊಲೀಸ್ ಇಲಾಖೆ ವಿಶೇಷವಾಗಿ ಕಣ್ಣಿಡಲಿದೆ. ಸಾಮಾಜಿಕ ಜಾಲತಾಣವನ್ನು ಚುನಾವಣೆಗೆ ಬಳಕೆ ಮಾಡುವವರ ವಿರುದ್ಧ ಸ್ವಯಂ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದರು.
Comments are closed.