ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ : ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಮಾರ್ಚ್. 22: ದೇಶಾದ್ಯಂತ ಮೋದಿ ಅಲೆ ಪ್ರಬಲವಾಗಿದ್ದು, ಭಾರತವನ್ನು ಜಗತ್ತಿಗೆ ಮಾಗದರ್ಶನ ನೀಡುವ ರಾಷ್ಟ್ರವನ್ನಾಗಿ ಮೋದಿ ಪರಿವರ್ತಿಸಲಿದ್ದಾರೆ. ಅರಬ್ ರಾಷ್ಟ್ರದಲ್ಲೂ ಮಂದಿರ ನಿರ್ಮಾಣ ಮಾಡಿದ ಸಾಧನೆ ಮೋದಿ ಅವರದ್ದಾಗಿದೆ. ಕಾಂಗ್ರೆಸ್ ಮುಕ್ತ ಭಾರತವೆಂದರೆ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮೋದಿಯವ ರನ್ನು ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ ಎಂದು ಸಂಸದ ಹಾಗೂ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಗುರುವಾರ ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಬಿಜೆಪಿ ಮಂಗಳೂರು ನಗರ ದಕ್ಷಿಣ ಕಾರ್ಯಕರ್ತರ ಸಮಾವೇಶ ವನ್ನುದ್ದೇಶಿಸಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಜನಪರ ಆಡಳಿತ, ಕಪ್ಪುಹಣದ ನಿಯಂತ್ರಣದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾಂಗ್ರೆಸ್ ಮುಕ್ತ ಭಾರತ, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಮೂರು ಭರವಸೆ ನೀಡಿದ್ದರು. ಐದು ವರ್ಷದ ಅವಧಿಯಲ್ಲಿ ತಾನು ನೀಡಿದ ಭರವಸೆಯಂತೆ ಕೆಲಸ ನಿರ್ವಹಿಸಿದ ನರೇಂದ್ರ ಮೋದಿ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಲು ನಾವೆಲ್ಲಾ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಶಾಸಕ ವೇದವ್ಯಾಸ ಕಾಮತ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಪಾಧ್ಯಕ್ಷ ರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಆನಂದ ಜಿ.,ಮತ್ತು ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ಸಂಜೀವ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಲೋಕಸಭಾ ಚುನಾವಣಾ ಉಸ್ತುವಾರಿ ಗೋಪಾಲಕೃಷ್ಣ ಹೇರಳೆ, ಮುಖಂಡ ಪ್ರತಾಪಸಿಂಹ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಮೂಡುಬಿದಿರೆ, ಗಣೇಶ ಹೊಸಬೆಟ್ಟು, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ಸತೀಶ್ ಪ್ರಭು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
Comments are closed.