ಕರಾವಳಿ

ಲಾಲ್‌ಭಾಗ್‌ನ ಲೇಡಿಸ್ ಬಾರ್‌ಗೆ ಪೊಲೀಸ್ ದಾಳಿ : ಐವರ ಸೆರೆ – 8 ಮಹಿಳೆಯರ ರಕ್ಷಣೆ

Pinterest LinkedIn Tumblr

ಮಂಗಳೂರು, ಮಾರ್ಚ್.26: ಅಶ್ಲೀಲ ನೃತ್ಯ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಲಾಲ್‌ಭಾಗ್‌ನ ಸಾಯಿಬಿನ್ ಕಾಂಪ್ಲೆಕ್ಸ್‌ನಲ್ಲಿರುವ ಲೇಡಿಸ್ ಬಾರಿಗೆ ಬರ್ಕೆ ಪೊಲೀಸರು ದಾಳಿ ನಡೆಸಿ ಐದು ಮಂದಿ ಪುರುಷರನ್ನು ಬಂಧಿಸಿ, 8 ಮಹಿಳೆಯರನ್ನು ರಕ್ಷಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಸಾಯಿಬಿನ್ ಕಾಂಪ್ಲೆಕ್ಷ್‌ನಲ್ಲಿರುವ ಲೇಡಿಸ್ ಬಾರ್‌ನಲ್ಲಿ ಹಲವಾರು ಸಮಯಗಳಿಂದ ಅಶ್ಲೀಲ ನೃತ್ಯ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಬಾರಿನಲ್ಲಿ ಅಶ್ಲೀಲ ನೃತ್ಯ ನಡೆಸುತ್ತಿದ್ದ ಆರೋಪದಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ 8 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ದಿಢೀರ್ ದಾಳಿ :

ಸಾಯಿಬಿನ್ ಕಾಂಪ್ಲೆಕ್ಷ್‌ನಲ್ಲಿರುವ ಈ ಲೇಡಿಸ್ ಬಾರ್‌ನಲ್ಲಿ ಕೆಲವು ತಿಂಗಳುಗಳಿಂದ ಅಶ್ಲೀಲ ನೃತ್ಯ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ನೃತ್ಯಕ್ಕಾಗಿ ಮುಂಬಾಯಿ, ಪಶ್ಚಿಮ ಬಂಗಾಳ, ಹೈದಾರಬಾದ್ ಮುಂತಾದ ಹೊರರಾಜ್ಯದ ಯುವತಿಯರನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ.

ಈ ಲೇಡಿಸ್ ಬಾರ್‌ ಆರಂಭಗೊಂಡ ಒಂದೇ ತಿಂಗಳಲ್ಲಿ ಬಂದ್ ಆಗಿತ್ತು. ಕೆಲವೊಂದು ಹಿಂದೂಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಈ ಬಾರ್ ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಾರ್ ನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡಲಾಗಿತ್ತು.

ಆದರೆ ಕೆಲವೇ ದಿನಗಳಲ್ಲಿ ಬಾರ್ ಮತ್ತೆ ತಲೆ ಎತ್ತಿದ್ದು, ಇದೀಗ ಕಳೆದ ಮೂರು ತಿಂಗಳಿನಿಂದ ಮತ್ತೆ ಅಶ್ಲೀಲ ನೃತ್ಯದೊಂದಿಗೆ ಕಾರ್ಯಾಚರಿಸುತ್ತಿದ್ದರೂ ಈ ಬಗ್ಗೆ ಧ್ವನಿ ಎತ್ತುವ ಯತ್ನ ಮಾಡಲಿಲ್ಲ. ಈ ಹಿಂದೆ ಈ ಬಾರ್ ಚಟುವಟಿಕೆಗಳ ಬಗ್ಗೆ ವಿರೊಧ ವ್ಯಕ್ತ ಪಡಿಸಿದವರಂತೂ ಈ ಬಾರ್ ಮತ್ತೆ ಆರಂಭವಾದ ಬಳಿಕ ಈ ಕಡೆ ಮತ್ತೆ ತಲೆ ಹಾಕಲಿಲ್ಲ.

ಈ ಮಧ್ಯೆ ಎರಡು ತಿಂಗಳ ಹಿಂದೆ ಈ ಬಾರ್ ಸಮಯ ಮೀರಿ (12ಗಂಟೆಯ ಮೇಲೂ) ಕಾರ್ಯಾಚರಿಸುತ್ತಿದ್ದ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೊಸದಾಗಿ ಬಂದಿದ್ದ ಮಂಗಳೂರು ಸೆಂಟ್ರಲ್ ಎಸಿಪಿ ಭಾಸ್ಕರ್ ಒಕ್ಕಲಿಗ ಅವರು ತಮ್ಮ ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಸ್ಥಳದಲ್ಲಿದ್ದವರನ್ನು ಲಾಟಿ ರುಚಿ ತೋರಿಸಿ ಓಡಿಸಿದ್ದರು. ಬಳಿಕ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಇಲ್ಲಿಂದ ವರ್ಗಾವಣೆಗೊಂಡಿದ್ದರು.

ಬಳಿಕ ಇಲ್ಲಿ ನಿರಂತರವಾಗಿ ಅಶ್ಲೀಲ ನೃತ್ಯ ನಡೆಯುತ್ತಿದ್ದು, ಯುವಕ,ಯುವತಿಯರ ದಂಡೇ ಈ ಬಾರ್‌ಗೆ ಬರುತ್ತಿತ್ತು. ಮನಪಾ ಹಾಗೂ ಬರ್ಕೆ ಪೊಲೀಸ್ ಠಣೆಯ ಮೂಗಿನ ನೇರದಲ್ಲಿಯೇ ಈ ಬಾರ್ ತಡ ರಾತ್ರಿಯವರೆಗೆ ನಡೆಯುತ್ತಿದ್ದರು ಯಾರೂ ಕೂಡ ಈ ಬಗ್ಗೆ ಕ್ರಮಕೈಗೊಳ್ಳುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕಾಂಪ್ಲೆಕ್ಷ್‌ನಲ್ಲಿರುವ ಕೆಲ ವ್ಯಾಪರಸ್ಥರು ತಮ್ಮತಮ್ಮಲ್ಲಿ ತಮ್ಮ ನೋವು ತೋಡಿಕೊಳ್ಳುತ್ತಿದ್ದರು.

ಸಾಯಿಬೀನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಈ ಬಾರ್ ಸೇರಿ ನಗರದ ಹಲವು ಬಾರ್, ಪಬ್ ಗಳಲ್ಲಿ ಯುವತಿಯರನ್ನು‌ ಬಳಸಿ ಅಶ್ಲೀಲ ವ್ಯವಹಾರ ನಡೆಸೋ ದೂರುಗಳು ಈ ಹಿಂದೆಯೇ ಕೇಳಿ ಬಂದಿತ್ತು. ಆದ್ರೆ ಆಗಿನ ಪೊಲೀಸ್ ಆಯುಕ್ತರು ಈ ಬಗ್ಗೆ ರಾಜಕೀಯ ‌ಪ್ರಭಾವಕ್ಕೆ ಒಳಗಾಗಿ ಸುಮ್ಮನಾಗಿದ್ದರು ಎನ್ನಲಾಗಿದೆ. ಆದ್ರೆ ಚುನಾವಣೆ ಹಿನ್ನೆಲೆಯಲ್ಲಿ ಬಂದಿರೋ ನೂತನ ಕಮಿಷನರ್ ಸಂದೀಪ್ ಪಾಟೀಲ್ ಇಂಥಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಕೆಲ ದಿನಗಳ ಹಿಂದೆಯೇ ಪಬ್ , ಬಾರ್ ಗಳ ಅವಧಿ ವಿಚಾರದಲ್ಲಿ ಕಮಿಷನರ್ ಖಡಕ್ ಸೂಚನೆ ನೀಡಿದ್ದರು. ಇದೀಗ ಗಂಭೀರ ದೂರಿನ ಬೆನ್ನಲ್ಲೇ ಈ ದಾಳಿ ನಡೆದಿದೆ.

 

Comments are closed.