ಮಂಗಳೂರು : ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ತಂಡ ಹಾಗೂ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಕೊಡ್ಮಾನ್ ಸಮೀಪದ ನೆತ್ತರಕೆರೆ ನಿವಾಸಿ ಜಾವೆದ್ (28) ಹಾಗೂ ತೊಕ್ಕೊಟ್ಟು ನಿವಾಸಿ ಶಾನ್ ನವಾಜ್ (33) ಎಂದು ಹೆಸರಿಸಲಾಗಿದ್ದು, ಆರೋಪಿಗಳು ಪ್ರಸ್ತುತ ನಗರದ ಪಿವಿಎಸ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಿದ್ದು ಈ ಅಕ್ರಮ ದಂದೆಯಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಇನ್ನೋರ್ವ ಆರೋಪಿ ಮುಂಬೈಯವನಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ..
ಮಂಗಳೂರು ನಗರದ ಸಿಸಿಬಿ ತಂಡ ಹಾಗೂ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯವರು ಮಂಗಳೂರು ನಗರದ ಪಿ.ವಿ.ಎಸ್ ವ್ರತ್ತದ ಬಳಿ ಡಿ.ಎಂ.ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 72 ಸಾವಿರ ರೂ. ಮೌಲ್ಯದ 24 ಗ್ರಾಂ ಎಂಡಿಎಂ ಡ್ರಗ್ಸ್, ಬೈಕ್, ಮೊಬೈಲ್ ಸೇರಿದಂತೆ ಒಟ್ಟು 2.20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಜಾವದ್ ನ ವಶದಿಂದ 24 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್, ಕೆ.ಟಿ.ಎಂ.ಡ್ಯೂಕ್ ಮೋಟಾರು ಸೈಕಲ್,ಡಿಜಿಟಲ್ ತೂಕದಯಂತ್ರ ಹಾಗೂ ಮೊಬೈಲ್ ಪೋನ್ ಮತ್ತು ಶಾನ್ ನವಾಜ್ ವಶದಿಂದ ಮೊಬೈಲ್ ಪೋನ್, ಒಟ್ಟು 2,20,100/- ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಜಾವೆದ್ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಶಾನವಾಝ್ ಮಧ್ಯವರ್ತಿಯಾಗಿ ಮುಂಬೈ ವ್ಯಕ್ತಿಯಿಂದ ಡ್ರಗ್ಸ್ ತಂದು ಕೊಡುತ್ತಿದ್ದ. ಆರಂಭದಲ್ಲಿ ಜಾವೆದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ವಿವರ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ರವರ ಆದೇಶದಂತೆ ಪೊಲೀಸ್ ಉಪ ಆಯುಕ್ತರು( ಕಾ ಮತ್ತು ಸು) ರವರಾದ ಹನುಮಂತರಾಯ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯರವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿ.ಸಿ.ಆರ್.ಬಿ ಎಸಿಪಿ ವಿನಯ್ ಗಾಂವ್ಕರ್ ಹಾಗೂ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಹಾಗೂ ಹಾಗೂ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ.ಕೆ., ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
=====================
Comments are closed.