ಐಜ್ವಾಲ್: ತನ್ನ ಸೈಕಲ್ ಚಕ್ರಕ್ಕೆ ಸಿಲುಕಿದ್ದ ಕೋಳಿ ಮರಿಯನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ತನ್ನ ಬಳಿ ಇದ್ದ ಹತ್ತು ರೂಪಾಯಿ ನೋಟು ನೀಡಿ ಚಿಕಿತ್ಸೆ ನೀಡಿ ಎನ್ನುವ ಪುಟ್ಟ ಬಾಲಕ ಇಂಟರ್ ನೆಟ್ ಸೆನ್ಸೇಷನ್ ಆಗಿ ಬದಲಾಗಿದ್ದಾನೆ.
ಹೌದು.. ಒಂದು ಕೈಯಲ್ಲಿ ಕೋಳಿಮರಿ, ಮತ್ತೊಂದು ಕೈಯಲ್ಲಿ 10 ರೂ.ನೋಟು ಹಿಡಿದಿರುವ ಪುಟ್ಟ ಬಾಲಕನೊಬ್ಬನ ಚಿತ್ರಕ್ಕೆ ಇಂಟರ್ನೆಟ್ ಲೋಕ ಫುಲ್ ಫಿದಾ ಆಗಿದ್ದು, ಬಾಲಕನ ಮುಗ್ದತೆಗೆ ಇಡೀ ಸೋಷಿಯಲ್ ಮೀಡಿಯಾ ಬಳಕೆದಾರರು ಮೂಕವಿಸ್ಮಿತರಾಗಿದ್ದಾರೆ. ಸತ್ತುಹೋದ ಕೋಳಿಮರಿಯನ್ನು ಹಿಡಿದು, ಅದಕ್ಕೆ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ತೆರಳಿದ ಈ ಬಾಲಕ, ತಾನು ಉಳಿತಾಯ ಮಾಡಿದ್ದ ಹತ್ತು ರೂಪಾಯಿಯನ್ನು ಹಿಡಿದು, ವೈದ್ಯರ ಬಳಿ ಅಂಗಲಾಚುತ್ತಿದ್ದಾನೆ..!
ಏನಾಗಿತ್ತು?
ಮಿಜೋರಾಂನ ಸಾಯಿರಂಗ್ ಎಂಬಲ್ಲಿಯ ಆರು ವರ್ಷ ವಯಸ್ಸಿನ ದೆರಕ್ ಸಿ ಲಾಲ್ ಚಾನ್ಹಿಮಾ ಎಂಬ ಬಾಲಕ ತನ್ನ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ. ಈ ಸಂದರ್ಭದಲ್ಲಿ ಆತನ ಸೈಕಲ್ಲಿಗೆ ಕೋಳಿಮರಿಯೊಂದು ಅಡ್ಡಬಂದಿತ್ತು. ಅದು ತಕ್ಷಣವೇ ಸತ್ತು ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ. ನೋಟನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದ.. ಆಸ್ಪತ್ರೆಯ ಸಿಬ್ಬಂದಿಗಳ ಬಳಿ, ಕೋಳಿಮರಿಗೆ ಚಿಕಿತ್ಸೆ ನೀಡುವಂತೆ ಅಂಗಲಾಚಿ ಬೇಡಿಕೊಂಡಿದ್ದ. ಆದರೆ ಕೋಳಿ ಮರಿ ಆಗಲೇ ಸತ್ತು ಹೋಗಿದೆ, ಕೋಳಿಮರಿಗಳಿಗೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋಲ್ಲ ಎಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಈ ಬಾಲಕನನ್ನು ವಾಪಸ್ ಕಳಿಸಿದ್ದಾರೆ.!
ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಈ ಪುಟ್ಟ ಪೋರನ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, 85 ಸಾವಿರಕ್ಕೂ ಹೆಚ್ಚು ಖಾತೆದಾರರು ಈ ಚಿತ್ರವನ್ನು ಶೇರ್ ಮಾಡಿದ್ದರೆ, 11 ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ಕಮೆಂಟ್ ಮಾಡಿದ್ದಾರೆ..
Comments are closed.