ಕರಾವಳಿ

ಪೂಜಾರಿ ಪುತ್ರ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ಮಾಡುತ್ತಿದ್ದಾರೆಯೇ..? ಅನುಮಾನ ಹುಟ್ಟಿಸಿದ ಸಂತೋಷ್ ಪೂಜಾರಿ ದಿಢೀರ್ ನಡೆ

Pinterest LinkedIn Tumblr

ಮಂಗಳೂರು, ಎಪ್ರಿಲ್.12 : ಕಾಂಗ್ರೆಸ್‌ನ ಹಿರಿಯ ಮುಖಂಡ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್ ಜೆ. ಪೂಜಾರಿ ಶೀಘ್ರದಲ್ಲೇ ರಾಜಕೀಯ ರಂಗ ಪ್ರವೇಶ ಮಾಡುತ್ತಾರೆಯೇ ಎಂಬ ಅನುಮಾನ ಮೂಡಿದೆ.

ಇದಕ್ಕೆ ಕಾರಣ ಪೂಜಾರಿ ಅವರ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದ ಅವರ ಪುತ್ರ ಸಂತೋಷ್ ಜೆ. ಪೂಜಾರಿ ಇಂದು ನಗರದ ಹೊಟೇಲೊಂದರಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಕರೆದು ಬಿಲ್ಲವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರನ್ನು ಬೆಂಬಲಿಸ ಬೇಕೆಂದು ಕರೆ ನೀಡಿದ್ದಾರೆ.

ಮಾತ್ರವಲ್ಲದೇ ಸದ್ಯಕ್ಕೆ ಸಕ್ರಿಯ ರಾಜಕಾರಣದ ಬಗ್ಗೆ ಆಲೋಚನೆ ಮಾಡಿಲ್ಲ. ಆದರೆ ಅನಿವಾರ್ಯವಾದರೆ ಸಕ್ರಿಯ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆಲೋಚಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ತಂದೆಯವರ ಗಮನಕ್ಕೆ ತಂದು ಈ ಪತ್ರಿಕಾಗೋಷ್ಠಿ ನಡೆಸುತ್ತಿರುವುದಾಗಿ ಹೇಳುವ ಮೂಲಕ ರಾಜಕಾರಣ ಪ್ರವೇಶಕ್ಕೆ ಕುಟುಂಬದ ಹಿರಿಯರ ಗ್ರೀನ್ ಸಿಗ್ನಲ್ ದೊರಕಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಸೂಚ್ಯವಾಗಿ ತಿಳಿಸಿದ್ದಾರೆ. ಪೂಜಾರಿ ಅವರ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದ ಅವರ ಪುತ್ರನ ದಿಢೀರ್ ಈ ನಡೆ ಇದೀಗ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯವನ್ನು ಅಥವಾ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಕಡೆಗಣಿಸಿಲ್ಲ. ತಂದೆಯವರಿಗೆ ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗದಿರುವ ಕಾರಣ ಅವರ ಪರವಾಗಿ ಕಳೆದ ಒಂದು ವಾರದಿಂದ ತಾನು ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವುದಾಗಿ ಸಂತೋಷ್ ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ತಮ್ಮ ತಂದೆಯ ಆಪ್ತ ( ಬಲಗೈ ಬಂಟ ಎಂದೇ ಹೇಳ ಬಹುದು) ಬಿಲ್ಲವ ಸಮುದಾಯದ ಮುಂಚೂಣಿ ನಾಯಕ ಹರಿಕೃಷ್ಣ ಬಂಟ್ವಾಳ್ ಅವರಿಗೆ ಟಾಂಗ್ ನೀಡಿದ್ದಾರೆ.

ಕಳೆದ 28 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಬದಲು ಕರಾವಳಿಯ ಆರ್ಥಿಕ, ಔದ್ಯೋಗಿಕ ವ್ಯವಸ್ಥೆಗಳನ್ನು ತಲ್ಲಣಗೊಳಿಸುವ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರಿಂದ ಇಲ್ಲಿನ ವಾಣಿಜ್ಯ, ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಅಗತ್ಯಗಳ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಸಮರ್ಥವಾಗಿ ಧ್ವನಿ ಎತ್ತಬಲ್ಲ ಸಾಮರ್ಥ್ಯವಿರುವ ಸುಶಿಕ್ಷಿತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಬೆಂಬಲಿಸಬೇಕೆಂದು ಅವರು ಹೇಳಿದ್ದಾರೆ.

ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮೊಬೈಲ್ ಸಂಖ್ಯೆ : 9035089084

Comments are closed.