ಮಂಗಳೂರು, ಎಪ್ರಿಲ್.16; ನರೇಂದ್ರ ಮೋದಿಯವರ ಯೋಜನೆಗಳು ದೂರದೃಷ್ಟಿಯುಳ್ಳದ್ದು, ಇದರ ಅಭಿವೃದ್ಧಿ ಮುಂದಿನ ಐದು ವರ್ಷಗಳಲ್ಲಿ ಸಾಕಾರಗೊಳ್ಳಲಿದೆ. ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವುದು ಈ ದೇಶದ ಎಲ್ಲಾ ಜನತೆಯ ಅಭಿಪ್ರಾಯ. ಮುಂದಿನ ಐದು ವರ್ಷಕ್ಕೂ ಅವರು ಮತ್ತೆ ಪ್ರಧಾನಿಯಾಗಲಿದ್ದು, ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಮಂಗಳೂರಿನ ಓಷಿಯಾನ್ ಪರ್ಲ್ ಹೊಟೇಲ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಪಡೆಯಲಿದೆ. ಬಿಜೆಪಿ ಗರಿಷ್ಠ ಸ್ಥಾನಗಳನ್ನು ಪಡೆಯಲಿದ್ದಾರೆ. ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ದೇಶದ ಮೂಲ ಸೌಕರ್ಯಗಳಾದ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ ,ಬಂದರು ಅಭಿವೃದ್ಧಿಗೆ ಕಳೆದ ಐದು ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಗರಿಷ್ಠ ಅನುದಾನ ನೀಡಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ 25ರಿಂದ 30 ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದೆ. ದೇಶದಲ್ಲಿ 200 ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ದ.ಕ. ಜಿಲ್ಲೆಗೆ ಈಗ ಇರುವ ಸಂಸದ ನಳಿನ್ ಕುಮಾರ್ ಕಟೀಲು ಅವರೇ ಮುಂದಿನ ಸಂಸದರಾಗಲಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪ್ರಾಮುಖ್ಯತೆ ತಿಳಿಯಲಿದೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.
ಬಿಜೆಪಿ ದೇಶದ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆ, ವಿಮಾನ ನಿಲ್ದಾಣ, ಮೀನುಗಾರಿಕೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ನೆರೆದ ಬೃಹತ್ ಸಂಖ್ಯೆಯ ಜನಸ್ತೋಮವನ್ನು ಗಮನಿಸಿದಾಗ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯ ಕ್ರೀಯಾಶೀಲ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾಗಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದ್ವರೌ ಹೇಳಿದರು.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮಾತ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಟಂದೂರು, ಮಾಜಿ ಉಪ ಸಭಾ ಪತಿ ಯೋಗೀಶ್ ಭಟ್, ಪಕ್ಷದ ಪ್ರಮುಖರಾದ ರವಿಶಂಕರ್ ಮಿಜಾರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.