ಕರಾವಳಿ

ಬಹುನಿರೀಕ್ಷಿತ ಗೋಲ್‌ಮಾಲ್’ ತುಳು ಸಿನಿಮಾ ಎಪ್ರಿಲ್19ರಂದು ‘ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

Pinterest LinkedIn Tumblr

ಮಂಗಳೂರು :ಮಂಜುನಾಥ ನಾಯಕ್ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರ್ ನಿರ್ಮಾಣದಲ್ಲಿ ರಮಾನಂದ ನಾಯಕ್ ನಿರ್ದೇಶನ ದಲ್ಲಿ ತಯಾರಾದ ತುಳುವಿನ ಅದ್ದೂರಿ ಬಜೆಟ್‌ನ `ಗೋಲ್‌ಮಾಲ್’ ಸಿನಿಮಾ ಎಪ್ರಿಲ್ 19ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ರಮಾನಂದ ನಾಯಕ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ‘ಗೋಲ್‌ಮಾಲ್’ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಮಂಗಳೂರು, ಕಾರ್ಕಳ, ಉಡುಪಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ತುಳುವಿನಲ್ಲಿ ನಿರ್ಮಾಣ ಗೊಂಡ ಭಾರೀ ಬಜೆಟ್‌ನ ಸಿನಿಮಾ ಇದಾಗಿದ್ದು, ಕನ್ನಡದ ಖ್ಯಾತ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ಇನ್ನುಳಿದಂತೆ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಸುನೀಲ್ ನೆಲ್ಲಿಗುಡ್ಡೆ, ಸುಂದರ ರೈ ಮಂದಾರ ಮೊದಲಾದವರ ತಾರಾ ಬಳಗವೇ ಇಲ್ಲಿದೆ. ‘ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಪೃಥ್ವಿ ಅಂಬಾರ್ ಸಿನಿಮಾದಲ್ಲಿ ನಾಯನಟ ರಾಗಿದ್ದಾರೆ. ಶ್ರೇಯಾ ಆಂಚನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾಕ್ಕೆ ಸುನಾದ್ ಗೌತಮ್ ಸಂಗೀತದೊಂದಿಗೆ ಛಾಯಾಗ್ರಹಣ ದಲ್ಲಿ ದುಡಿದಿದ್ದಾರೆ. ಶಂಕರ್ ನಾರಾಯಣ್ ಪೆರ್ಡೂರು ಸಂಕಲನ ಮಾಡಿದ್ದಾರೆ. ಶಿವು ಸಾಹಸ ದೃಶ್ಯ ಸಂಯೋಜಿಸಿದ್ದಾರೆ. ಕಲಾ ನಿರ್ದೇಶಕರಾಗಿ ದಿನೇಶ್ ಜೋಗಿ ದುಡಿದಿದ್ದಾರೆ ಎಂದರು.

ಗೋಲ್‌ಮಾಲ್‌ನ ದಿನಲಾ ಓ ನಿನ್ನನೇ….

ಪೃಥ್ವಿ ಅಂಬಾರ್ ಮತ್ತು ಶ್ರೇಯಾ ಅಂಚನ್ ನಟನೆಯ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಗೋಲ್‌ಮಾಲ್ ಸಿನಿಮಾದ ದಿನಲಾ ಓ ನಿನ್ನನೇ…ಹಾಡಿನ ಈ ವಿಡಿಯೋ ಟೀಸರ್ ಯುವ ಮನಸ್ಸುಗಳಲ್ಲಿ ತಾಳ ಹಾಕುವಂತೆ ಮಾಡುತ್ತಿದೆ. ನೀರಿನಾಟದ ಅದ್ಭುತ ಪ್ರೇಮ ದೃಶ್ಯವಿರುವ ಈ ಹಾಡಿನಲ್ಲಿ ಪ್ರೀತಿಯು ಹೊಳೆಯಾಗಿ ಹರಿದಂತಿದೆ. ಯುವ ಮನಸ್ಸುಗಳು ಇದನ್ನು ಭಾರೀ ಮೆಚ್ಚಿದ್ದು, ಸಿನಿಮಾ ಬಿಡುಗಡೆಗೆ ಚಾತಕಪಕ್ಷಿಯಂತೆ ಕಾಯುವಂತೆ ಮಾಡಿದೆ. ಲಕ್ಷಾಂತರ ಮಂದಿ ಈಗಾಗಲೇ ಈ ಟೀಸರ್ ಅನ್ನು ವೀಕ್ಷಿಸಿದ್ದು, ಭಾರೀ ಮೆಚ್ಚುಗೆ ಪ್ರಕಟವಾಗುತ್ತಿದೆ.

ಕೊಲೆ ಪ್ರಕರಣದ ಕಥೆಯ ಸುತ್ತ ನಿರ್ಮಾಣವಾಗಿದೆ ಎಂಬ ನಂಬಲು ಕಾರಣವಾಗಿರುವಂಥ ಇದರ ಹಿಂದಿನ ಒಂದು ಟೀಸರ್ ಕೂಡ ಭಾರೀ ವೈರಲ್ ಆಗಿ ಸುದ್ದಿ ಮಾಡಿತ್ತು. ಈಗ ಒಂದು ಹೊಸ ಪ್ರೇಮದೃಶ್ಯವಿರುವ ಈ ವಿಡಿಯೋ ತುಣುಕು ಚಿತ್ರದ ಮೇಲೆ ಅಪಾರ ನಿರೀಕ್ಷೆ ಮೂಡುವಂತೆ ಮಾಡಿದೆ. ಗೋಲ್‌ಮಾಲ್ ಚಿತ್ರದ ಟೀಸರನ್ನು ಈಗಾಗಲೇ 2 ಲಕ್ಷ ಜನ ವೀಕ್ಷಿಸಿದ್ದಾರೆ. ಇದೊಂದು ತುಳು ಚಿತ್ರರಂಗದ ಮಟ್ಟಿಗೆ ದಾಖಲೆಯಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಸಾಯಿ ಕುಮಾರ್ ಅವರು ನಟಿಸಿದ್ದಾರೆ ಎಂದವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ಪೃಥ್ವಿ ಅಂಬಾರ್, ಚಿತ್ರ ನಟ ಸುನೀಲ್ ನೆಲ್ಲಿಗುಡ್ಡೆ ಹಾಗೂ ನಿರ್ಮಾಪರು ಉಪಸ್ಥಿತರಿದ್ದರು.

Comments are closed.