ಕರಾವಳಿ

ಶ್ರೀ ಕ್ಷೇತ್ರ ಕದ್ರಿಯಲ್ಲಿ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ ಹಿನ್ನೆಲೆ : ಮೇ.3ರಂದು ಹೊರೆಕಾಣಿಕೆ ದಿಬ್ಬಣ

Pinterest LinkedIn Tumblr

ಮಂಗಳೂರು, ಮೇ.01 : ಕದ್ರಿ ಶ್ರೀ ಮಂಜುನಾಥದೇವರ ಬ್ರಹ್ಮಕಲಶೋತ್ಸವವು ದಿನಾಂಕ 02-05-2019ರಿಂದ 11-05-2019 ರವರೆಗೆ ಜರಗಲಿದ್ದು. ಆ ಪ್ರಯುಕ್ತ ದಿನಾಂಕ 03.05.2019ನೇ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಹಸಿರು ಹೊರೆಕಾಣಿಕೆಯ ಹೊರೆ ದಿಬ್ಬಣವು ಬಹಳ ವಿಜೃಂಭಣೆಯಿಂದ ಮಂಗಳೂರಿನ ನೆಹರೂ ಮೈದಾನದಿಂದ ಹೊರಡಲಿರುವುದು.

ಸಂಘ ಸಂಸ್ಥೆಗಳು ಹೊರೆಕಾಣಿಕೆಯನ್ನು ತಮ್ಮ ವಾಹನದ ಮೂಲಕ ಮಧ್ಯಾಹ್ನ 2 ಗಂಟೆಯ ಒಳಗೆ ನೆಹರೂ ಮೈದಾನವನ್ನು ತಲುಪುವಂತೆ ಕೋರಲಾಗಿದೆ ಎಂದು ಹಸಿರು ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಗಣೇಶ್ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೇ 2ರಿಂದ ಮೇ 10ರವರೆಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ಆಯೋಜನೆಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ. ಪುಣ್ಯ ಕಾರ್ಯದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರವನ್ನು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುದೀಪಗಳಿಂದ ಶೃಂಗರಿಸಲಾಗಿದೆ. ಕದ್ರಿ ಮಠಾಧೀಶರಾದ ಶ್ರೀ ರಾಜಾನಿರ್ಮಲನಾಥ್‌ ಜೀ ಉಪಸ್ಥಿತಿಯಲ್ಲಿ ದೇರೆಬೈಲು ಬ್ರಹ್ಮಶ್ರೀ ಶ್ರೀ ವಿಠಲದಾಸ್‌ ತಂತ್ರಿವರೇಣ್ಯರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.

ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸುತ್ತುಪೌಳಿ ಪುನರ್‌ ನಿರ್ಮಾಣ ಕಾಮಗಾರಿ, ಶನಿಪೂಜೆ, ಸತ್ಯನಾರಾಯಣ ಪೂಜಾ ಹಾಲ್‌, ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಗ್ರಾನೈಟ್‌ ಹಾಸುವ ಕಾಮಗಾರಿ ನಡೆದಿದೆ. ಮೇ 2ರಿಂದ 11ರವರೆಗೆ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ನಡೆಯಲಿದೆ.

ಬ್ರಹ್ಮಕಶಾಭಿಷೇಕದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಹೊರಭಾಗದಲ್ಲಿ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್‌ಗೆ ಕದ್ರಿ ಕ್ರೀಡಾಂಗಣ ಹಾಗೂ ಇತರ ಮೂರು ಜಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನು ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿದೆ.

ದೇವಾಲಯದ ಬಲಭಾಗದಲ್ಲಿ ಬ್ರಹ್ಮಕಲಶ ಮಂಟಪ ರಚನೆ ನಡೆಯುತ್ತಿದ್ದು, ಸುತ್ತಮುತ್ತ ಚಪ್ಪರ ಹಾಕಲಾಗಿದೆ. ದೇವಾಲಯದ ಬಲಭಾಗದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಾಣ ಮಾಡಲಾಗಿದ್ದು ಏಕಕಾಲಕ್ಕೆ 3 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾಗಿದೆ.

Comments are closed.