ಮಂಗಳೂರು, ಮೇ. 29 : ರಾಜ್ಯಾದ್ಯಂತ ಇಂದು (ಮೇ 29) ಪ್ರಸಕ್ತ ಸಾಲಿನ (2019-20) ಶೈಕ್ಷಣಿಕ ವರ್ಷವು ಆರಂಭಗೊಂಡಿದ್ದು, ಕಳೆದ ಎರಡು ತಿಂಗಳಿಂದ ರಜೆಯ ಮಜಾ ಅನುಭವಿಸಿದ ವಿದ್ಯಾರ್ಥಿಗಳು ಮತ್ತೆ ಶಾಲೆಗಳತ್ತ ಪ್ರಯಾಣ ಬೆಳೆಸಿದ್ದಾರೆ.
ಶಿಕ್ಷಣ ಇಲಾಖೆಯ ನಿರ್ದೇಶನದಂತೆ ದ.ಕ.ಜಿಲ್ಲೆಯ ಬಹುತೇಕ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಸಭೆ ಸೇರಿ ಮೊದಲೇ ಸಿದ್ಧತೆ ನಡೆಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ಜಿಲ್ಲೆಯ ಕೆಲವು ಶಾಲೆಗಳಲ್ಲಿ ತಳಿರು ತೋರಣ ಕಟ್ಟಿಕೊಂಡು ಹೊಸದಾಗಿ ನೋಂದಣಿ ಮಾಡಿಸಿಕೊಂಡು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳನ್ನು ಸ್ವಾಗತಿಸಲಾಯಿತು.
ದ.ಕ.ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿದ್ದರು ಖುಷಿ ಖುಷಿಯಿಂದಲೇ ಶಾಲೆಗೆ ಬಂದ ಮಕ್ಕಳು
ಕಳೆದ ಕೆಲವು ದಿನಗಳಿಂದ ಹೋಂವರ್ಕ್ ನ ಕಿರಿಕಿರಿ ಇಲ್ಲದೆ ಅಜ್ಜ, ಅಜ್ಜಿಯ ಮನೆ, ಪೋಷಕರೊಂದಿಗೆ ಪ್ರವಾಸ, ನೆಂಟರಮನೆ, ಹೊಲಗದ್ದೆ, ಕಾಡುಮೇಡು ಸುತ್ತಿ, ಊರಿನ ಕೆರೆಯಲ್ಲಿ ಈಜಾಡಿ ಮುಳುಗೆದ್ದು ರಜೆಯ ಮಜಾ ಅನುಭವಿಸಿದ ಮಕ್ಕಳು (ವಿದ್ಯಾರ್ಥಿಗಳು) ಇಂದಿನಿಂದ ಮತ್ತೆ ಮರಳಿ ಶಾಲೆಗೆ ಹೊರಟಿದ್ದಾರೆ. ಅವರನ್ನು ಶಾಲೆಯ ಶಿಕ್ಷಕ ವರ್ಗ ಕೂಡ ಬಹಳ ಉತ್ಸಹದಿಂದ ಸ್ವಾಗತಿಸಿದೆ.
ಜಿಲ್ಲೆಯಲ್ಲಿ ಹೆಚ್ಚಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ನೀಡಬೇಕು ಎಂಬ ಯಾವುದೇ ನಿರ್ದೇಶನಗಳು ಸರಕಾರದಿಂದ ಬಂದಿಲ್ಲ. ಆದರೆ ಈಗಾಗಲೇ ಕೆಲವು ಶಾಲೆಗಳ ಮುಖ್ಯಸ್ಥರು ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಅಂತಹ ಶಾಲೆಗಳಿಗೆ ಅಗತ್ಯಕ್ಕನುಸಾರವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದ್ದಾರೆ.
ಆದರೆ, ತೀವ್ರ ಬಿಸಿಲಿನ ತಾಪಮಾನದಿಂದಾಗಿ ರಾಜ್ಯದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭೋತ್ಸವವನ್ನು ಎರಡು ವಾರಗಳ ಕಾಲ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿದೆ. ರಾಯಚೂರಿನಲ್ಲಿ ಜೂನ್ 5ರವರೆಗೆ ಶಾಲೆ ಆರಂಭವನ್ನು ಜಿಲ್ಲಾಡಳಿತ ಮುಂದೂಡಿದೆ.
ಕರಾವಳಿಯಲ್ಲಿ ನೀರಿನ ಸಮಸ್ಯೆಯಿಂದ ಶಾಲಾ ಪ್ರಾರಂಭವನ್ನು ಮುಂದೂಡುವ ಕೂಗೂ ಕೇಳಿ ಬಂದರೂ ನಿಗದಿತ ದಿನಾಂಕದಂದೇ ಶಾಲೆ ಪ್ರಾರಂಭವಾಗಿದೆ. ಅಧಿಕಾರಿಗಳು ಶಾಲಾ ಆರಂಭೋತ್ಸವ ದಿನ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮೂಲಸೌಕರ್ಯ, ಶಿಕ್ಷಕರು, ವಿದ್ಯಾರ್ಥಿಗಳ ಹಾಜರಾತಿ ಮೊದಲಾದವುಗಳ ಪರಿಶೀಲನೆ ನಡೆಸಿದ್ದಾರೆ.
Comments are closed.