ಕುಂದಾಪುರ: ಬೈಂದೂರು, ಕೊಲ್ಲೂರು, ಗಂಗೊಳ್ಳಿ ಮುಂತಾದ ಕಡೆಯಿಂದ ಕುಂದಾಪುರ ನಗರವನ್ನು ಪ್ರವೇಶಿಸುವ ಪ್ರಮುಖ ರಸ್ತೆಯಾಗಿರುವ ಚಿಕ್ಕನ್‌ಸಾಲ್ ರಸ್ತೆಯನ್ನು ಪ್ರವೇಶಿಸುವ ಸಂಗಮ್ ಜಂಕ್ಷನ್ ಬಳಿಯಲ್ಲಿ ಗಜಗಾತ್ರದ ಕಾಂಕ್ರೀಟ್ ಬ್ಲಾಕ್‌ಗಳಿಂದ ಮಾಡಿರುವ ತಡೆಯನ್ನು ಇಂದು ತೆಗೆಯುತ್ತಾರೆ, ನಾಳೆ ತೆಗೆಯುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಕಾಯುತ್ತಿರುವ ಸಾರ್ವಜನಿಕರ ಹಾಗೂ ಸ್ಥಳೀಯರ ಸಹನೆಯ ಕಟ್ಟೆಯೊಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.
ಏನಿದು ಹೆದ್ದಾರಿ ಆವಾಂತರ ?
ರಾಷ್ಟ್ರೀಯ ಹೆದ್ದಾರಿ 66 ರನ್ನು ಚತುಷ್ಫಥವನ್ನಾಗಿಸುವ ಕಾಮಗಾರಿ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ರೀತಿಯಿಂದ ತಾಪತ್ರಯಗಳನ್ನು ಅನುಭವಿಸುತ್ತಿರುವ ಹೆದ್ದಾರಿಯ ಪ್ರಯಾಣಿಕರಿಗೆ ಕಳೆದ ಕೆಲವು ದಿನಗಳ ಹಿಂದೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕಂಪೆನಿಗಳು ತೆಗೆದುಕೊಂಡ ಒಂದು ಅವೈಜ್ಞಾನಿಕ ನಿರ್ಧಾರ ಇದೀಗ ಆಕ್ರೋಶದ ಕಿಡಿಯನ್ನು ಹೆಚ್ಚಿಸುತ್ತಿದೆ.
ಚಿಕ್ಕನ್‌ಸಾಲ್ ರಸ್ತೆಯನ್ನು ಹಾಗೂ ಆನಗಳ್ಳಿ ರಸ್ತೆಯನ್ನು ಹೆದ್ದಾರಿಗೆ ಸಂಪರ್ಕಿಸುವ ಸಂಗಮ್ ಜಂಕ್ಷನ್‌ನಲ್ಲಿ ಸಾಕಷ್ಟು ಜನಜಂಗುಳಿ ಹಾಗೂ ವಾಹನ ಸಂಚಾರ ಇರುವುದರಿಂದಾಗಿ ಅಪಘಾತ ಹೆಚ್ಚಾಗಬಹುದು ಎನ್ನುವ ಸಾರ್ವಜನಿಕ ಕಾಳಜಿಯ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾದ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದವರು ಜಂಕ್ಷನ್‌ಗೆ ಇರುವ ಪ್ರಾಮುಖ್ಯತೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸದೆ ರಸ್ತೆಯ ಪ್ರವೇಶವನ್ನೆ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಸ್ಥಳೀಯರ ಅಭಿಪ್ರಾಯವನ್ನು ಪರಿಗಣಿಸದೆ ರಾತ್ರಿ ಬೆಳಗಾಗುವುದರ ಒಳಗೆ ಜನರಿಂದ ಅಲುಗಾಡಿಸಲು ಆಗದೆ ಇರುವ ವಾಹನ ಭಾರಿ ಗಾತ್ರದ ಸಿಮೆಂಟ್ ಬ್ಲಾಕ್‌ಗಳನ್ನು ರಸ್ತೆಗೆ ಅಡ್ಡವನ್ನಿಟ್ಟು ರಸ್ತೆ ಪ್ರವೇಶವನ್ನೆ ಬಂದ್ ಮಾಡಿದ್ದಾರೆ. ಚಿಕ್ಕನ್‌ಸಾಲ್ ರಸ್ತೆಯಿಂದ ಹೆದ್ದಾರಿ ಪ್ರವೇಶ ಮಾಡುವವರು ಹಾಗೂ ಹೆದ್ದಾರಿ, ಆನಗಳ್ಳಿ ರಸ್ತೆಯಿಂದ ಚಿಕ್ಕನ್‌ಸಾಲ್ ರಸ್ತೆಯನ್ನು ಪ್ರವೇಶಿಸುವವರು ಕಿ.ಮೀ ದೂರದ ಮಾರ್ಕೇಟ್ ಯಾರ್ಡ್ ಬಳಿಯಲ್ಲಿ ಸುತ್ತಿ ಬರಬೇಕಾದ ಅನೀವಾರ್ಯತೆ ಇದೆ
ಸ್ಮಶಾನಕ್ಕೂ ಇದೆ ದಾರಿ: ಕುಂದಾಪುರ ನಗರ ನಿವಾಸಿಗಳಿಗಾಗಿ ಇರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಇರುವುದು ಇದೇ ಚಿಕ್ಕನ್‌ಸಾಲ್ ರಸ್ತೆಯ ತುದಿಯಲ್ಲಿ. ಪೇಟೆಯಲ್ಲಿ ಯಾರಾದರೂ ಮೃತ ಪಟ್ಟಲ್ಲಿ ಮೃತ ದೇಹವನ್ನು ಚಟ್ಟದ ಮೂಲಕ ಹೆಗಲಿನಲ್ಲಿ ಹೊತ್ತು ಕೊಂಡು ಬರುವ ಪದ್ದತಿಗಳು ಇದೆ. ಈ ರೀತಿ ಹೆಣವನ್ನು ಹೊತ್ತು ಕೊಂಡವರು ರಸ್ತೆಯನ್ನು ಸುತ್ತಿ ಹೆದ್ದಾರಿಯನ್ನು ದಾಟಬೇಕಾಗಿದೆ.
ಪೇಟೆಯಲ್ಲಿ ಇರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಹಲವು ಸುಪರ್ ಸ್ಪೇಶಾಲಿಟಿ ಆಸ್ಪತ್ರೆಗಳಿಗೆ ಬೈಂದೂರು, ಕೊಲ್ಲೂರು, ಉತ್ತರಕನ್ನಡ ಭಾಗದಿಂದ ಬರುವ ಆಂಬ್ಯುಲೆನ್ಸ್‌ಗಳಿಗೂ ಚಿಕ್ಕನ್‌ಸಾಲ್ ರಸ್ತೆಯೇ ಹತ್ತಿರದ ದಾರಿ. ಇದೀಗ ಈ ದಾರಿ ಬಂದ್ ಆಗುರುವುದರಿಂದ ಸುತ್ತು ಬಳಸಿವಾಹನ ದಟ್ಟಣೆಯ ನಡುವೆ ನಗರ ಪ್ರವೇಶಿಸುವ ಆನೀವಾರ್ಯತೆ ಇದೆ. ತುರ್ತು ಸಂದರ್ಭದಲ್ಲಿ ಕ್ಷಿಪ್ರವಾಗಿ ಆಸ್ಪತ್ರೆಗೆ ಸೇರಬೇಕಾದ ರೋಗಿಗಳಿಗಾಗುವ ತೊಂದರೆಯ ಬಗ್ಗೆ ಯಾರೂ ತಲೆಕೊಂಡಿಸಿಲ್ಲ ಎನ್ನುವ ನೋವು ಸ್ಥಳೀಯರಲ್ಲಿದೆ.
ಅಪಘಾತ ಹೆಚ್ಚಳವಾಗುವುದನ್ನು ನಿಯಂತ್ರಿಸಲು ವೈಜ್ಞಾನಿಕ ಚಿಂತನೆಗಳನ್ನು ನಡೆಸಿ ಪರ್ಯಾಯ ಆಲೋಚನೆಗಳನ್ನು ಮಾಡದೆ ಏಕಾಏಕಿ ರಸ್ತೆಯ ಪ್ರವೇಶವನ್ನು ಬಂದ್ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಸದ್ದು ಮಾಡುತ್ತಿದೆ. ಸ್ಥಳೀಯ ಯುವಕರು ಹಾಗೂ ಸಮಾಜ ಸೇವಾ ಸಂಘಟನೆಯ ಪ್ರಮುಖರು ಈಗಾಗಲೇ ಡಿವೈಎಸ್‌ಪಿ ಅವರನ್ನು ಭೇಟಿಯಾಗಿ ಜನರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಬೆಳಕು ಚಲ್ಲಿದ್ದಾರೆ.
ಈಚೆಗೆ ಕುಂದಾಪುರಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆಯವರು, ಸಾರ್ವಜನಿಕರ ಅಹವಾಲಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಹೆದ್ದಾರಿ ಇಲಾಖೆಯ ಅಧಿಕಾರಿಗೆ ದೂರವಾಣಿ ಕರೆಯನ್ನು ಮಾಡಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ. ಚರಂಡಿ ಕಾಮಗಾರಿಗಾಗಿ ತಾತ್ಕಾಲಿಕವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎನ್ನುವ ಅಧಿಕಾರಿಗಳು ಯಾವಾಗ ಬಂದ್ ತೆರುವು ಮಾಡುತ್ತೀರಿ ಎನ್ನುವ ಪ್ರಶ್ನೆಗಳಿಗೆ ಸ್ವಷ್ಟ ಉತ್ತರವನ್ನೆ ನೀಡುತ್ತಿಲ್ಲ.
ಕುಂದಾಪುರ ನಗರ ಪ್ರವೇಶಕ್ಕಾಗಿ ಇರುವ ಮೊದಲ ದಾರಿಯಾದ ಚಿಕ್ಕನ್‌ಸಾಲ್ ರಸ್ತೆಯನ್ನು ಮುಚ್ಚಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚಿಂತನೆ ನಡೆಸದ ಹೆದ್ದಾರಿ ಕಾಮಗಾರಿ ಕಂಪೆನಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
– ಸುರೇಂದ್ರ ಕಾಂಚನ್, ಸ್ಥಳೀಯ ನಿವಾಸಿ.
ಸಾರ್ವಜನಿಕ ಹಿಂದೂ ರುದ್ರಭೂಮಿ, ಆನಗಳ್ಳಿ, ಬಸ್ರೂರು ಮುಂತಾದ ಪ್ರಮುಖ ಸ್ಥಳಗಳಿಗೆ ನಗರವನ್ನು ಸಂಪರ್ಕಿಸುವ ಚಿಕ್ಕನ್‌ಸಾಲ್ ರಸ್ತೆಗೆ ತಡೆಯನ್ನು ಹಾಕಿರುವುದರಿಂದ ನಿತ್ಯ ನೂರಾರು ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
– ನಾಗೇಶ್ ಎಂ ಪುತ್ರನ್. ಅಧ್ಯಕ್ಷರು ಶ್ರೀ ಚಕ್ಕಮ್ಮ ದೇವಸ್ಥಾನ ಕಳಿನಕಟ್ಟೆ.
Comments are closed.