ಮಂಗಳೂರು, ಜೂನ್. 13 : ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಕಾಸರಗೋಡು ನಡುವಿನ ತೊಕ್ಕೊಟ್ಟು ಬಳಿ ನಿರ್ಮಾಣಗೊಂಡ ಚತುಷ್ಪಥ ರಸ್ತೆ ಮೇಲ್ಸೇತುವೆ (ಫ್ಲೈ ಓವರ್) ಗುರುವಾರ ಬೆಳಗ್ಗೆ ಲೋಕಾರ್ಪಣೆಗೊಂಡಿತು.
ಗೋವಾದಿಂದ ಕಾಸರಗೋಡು ( ಕೇರಳ) ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ತೊಕ್ಕೊಟ್ಟು ಬಳಿ ನಿರ್ಮಾಣಗೊಂಡಿರುವ ಈ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೇಲ್ಸೇತುವೆಯನ್ನು ಉದ್ಘಾಟನೆಗೊಳಿಸಿ ವಾಹನಸಂಚಾರಕ್ಕೆ ಮುಕ್ತಗೊಳಿಸಿದರು.
ಹಲವಾರು ವರ್ಷ ಗಳ ಮೇಲ್ಸೇತುವೆಯ ಕನಸು ಇದೀಗ ಉದ್ಘಾಟನೆಯ ಮೂಲಕ ನನಸಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಪ್ಲೈ ಓವರ್ ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಪಂಪುವೆಲ್ ಮೇಲ್ಸೇತುವೆ ಕಾಮಗಾರಿಯೂ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಈ ವೇಳೆ ಸಂಸದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಮುಖಂಡರಾದ ಚಂದ್ರಹಾಸ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಮನೋಜ್ ಆಚಾರ್ಯ, ಹರಿಯಪ್ಪ ಸಾಲಿಯಾನ್, ಸತೀಶ್ ಕುಂಪಲ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಸಂಸದರ ಶಿಫಾರಸ್ಸಿನಿಂದ 3 ತಿಂಗಳಲ್ಲಿ 24 ಗಂಟೆಗಳ ಕಾಲ ನಿರಂತರ ಕಾಮಗಾರಿ :
ಮಂಗಳೂರು -ಕೊಣಾಜೆ, ಮಂಗಳೂರು-ಉಳ್ಳಾಲ, ಮಂಗಳೂರು – ಕಾಸರಗೋಡು ರಸ್ತೆಗಳ ಪರಸ್ಪರ ಒಟ್ಟು ಸೇರುವ ತೊಕ್ಕೊಟ್ಟು ಜಂಕ್ಷನ್ ಪ್ರದೇಶದಲ್ಲಿ ಈ ಫ್ಲೈಓವರ್ ನಿರ್ಮಾಣಗೊಂಡಿದೆ. ಕಳೆದ ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಫ್ಲೈಓವರ್ ಕಾಮಗಾರಿಯಿಂದ ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿತ್ತು. ಅಲ್ಲದೇ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳಿಗಂತೂ ಸಾಕಷ್ಟು ತೊಂದರೆಯಾಗುತ್ತಿತ್ತು. ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಆರ್ಥಿಕ ಅಡಚಣೆಯಿಂದ ಅಮೆಗತಿಯಲ್ಲಿ ಸಾಗುತ್ತಿರುವ ವಿರುದ್ದ ವ್ಯಾಪಕ ಜನಕ್ರೋಶ ವ್ಯಕ್ತವಾಗಿತ್ತು.
ತೊಕ್ಕೊಟ್ಟು ಮೇಲ್ಸೇತುವೆಯ ವಿಹಂಗಮ ನೋಟ
ಕೊನೆಗೆ ಸಂಸದರ ಶಿಫಾರಸ್ಸಿನ ಮೇರೆಗೆ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ನಡೆಸುವ ಸಂಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದ್ದರು. ಸಂಸದರ ಶಿಫಾರಸ್ಸಿನಿಂದ 3 ತಿಂಗಳಲ್ಲಿ 24 ಗಂಟೆಗಳ ಕಾಲ ನಿರಂತರ ಕಾಮಗಾರಿ ನಡೆದಿದ್ದು, ಕಾಮಗಾರಿಗೆ ಮಳೆ ಅಡಚಣೆ ನೀಡದ ಕಾರಣ ಸದ್ಯ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಮೂಲಕ ಇದೀಗ ತೊಕ್ಕೊಟ್ಟು ಮೇಲ್ಸೇತುವೆ ಜನರ ಬಳಕೆಗೆ ಲಭ್ಯವಾಗಿದೆ.
Comments are closed.