ಮಂಗಳೂರು,ಜೂನ್.13 : ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸು ಪಡೆಯುತ್ತಿದೆ.ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ ಕಾರಣದಿಂದಾಗಿ ನಗರದಲ್ಲಿ ಬುಧವಾರ ಬೆಳಗ್ಗಿನಿಂದಲೇ ಮೋಡಮುಸುಕಿದ ವಾತಾವರಣವಿದ್ದು, ಬಿಟ್ಟು ಬಿಟ್ಟು ಮಳೆಯಾಗಿದೆ. ಸುರಿದ ಮಳೆಯಿಂದಾಗಿ ಬೆಳಗ್ಗಿನ ವೇಳೆ ನಗರದ ಕೆಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಕಷ್ಟಪಟ್ಟರು.
ಗುರುವಾರವೂ ಮಳೆ ಮುಂದುವರಿದಿದ್ದು, ಮುಂಗಾರು ಮಳೆ ಬಿರುಸುಗೊಳ್ಳುತ್ತಿದ್ದಂತೆ ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಎಲ್ಲೆಡೆ ರಸ್ತೆಗಳಲ್ಲಿ ನೀರು ತುಂಬಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗುವಂತಾಗಿದೆ.ಕೆಲವು ಪ್ರದೇಶಗಳಲ್ಲಿ ಮಣ್ಣು ಅಗೆದ ಪರಿಣಾಮ, ಮಳೆಯಿಂದಾಗಿ ಮಣ್ಣು ರಸ್ತೆಗೆ ಬಂದಿತ್ತು. ಇನ್ನು, ಬೆಳಗ್ಗಿನ ವೇಳೆ ಸುರಿದ ಜೋರಾದ ಮಳೆಗೆ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಕಷ್ಟಪಡುವಂತಾಯಿತು.
ಕೆಲವೊಂದು ಕಡೆಗಳಲ್ಲಿ ಒಳಚರಂಡಿ ಕೆಲಸಗಳು ನಡೆಯುತ್ತಿವೆ. ಜೈಲ್ ರೋಡ್‌ನಿಂದ ಬಿಜೈ ಮಾರುಕಟ್ಟೆ ಸಂಪರ್ಕ ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ಒಳಚರಂಡಿ ಕೆಲಸ ನಡೆಯುತ್ತಿದ್ದು, ಮಳೆಗಾಲ ಆರಂಭವಾದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇನ್ನು, ನಗರದ ಅನೇಕ ಕಡೆಗಳಲ್ಲಿ ಚರಂಡಿ ಸೇರಿದಂತೆ ರಸ್ತೆ ಕೆಲಸಗಳು ಮಳೆಯ ನಡುವೆಯೇ ನಡೆಯುತ್ತಿವೆ.
ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ :
ಈ ನಡುವೆ ಉಳ್ಳಾಲದಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಕಿಲೆರಿಯ ನಗರದಲ್ಲಿ ಎರಡು ಮನೆಗಳು ಸಮುದ್ರ ಪಾಲಾಗುತ್ತಿರುವು ದು ವೀಡಿಯೋದಲ್ಲಿ ಸೆರೆಯಾಗಿದ್ದು, ಸಮುದ್ರ ಭೋರ್ಗರೆತ ಭೀತಿ ಹುಟ್ಟಿಸುವಂತಿದೆ.
ಕಳೆದ ಕೆಲವು ದಿನಗಳಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಗಾಳಿಮಳೆಯೊಂದಿಗೆ ಕಡಲ್ಕೊರೆತದ ಆರ್ಭಟವು ತೀವ್ರಗೊಂಡಿದೆ. ತೀರದ ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ಕಡಲತಡಿಯ ಜನರು ಆತಂಕದಿಂದ ಬದುಕುವಂತಾಗಿದೆ.
ಕಡಲ್ಕೊರೆತದಿಂದಾಗಿ ಉಚ್ಚಿಲ ಕೋಟೆ ಬಳಿ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ. ಉಚ್ಚಿಲ ಕೋಟೆ ನಿವಾಸಿಗಳಾಗಿರುವ ಆರ್ಸಿಸಿ ಮನೆ ಹೊಂದಿರುವ ವಿಶ್ವನಾಥ್ ಹಾಗೂ ನಾಗೇಶ್ ಎಂಬವರ ಮನೆಯ ಶೆಡ್ ಬುಧವಾರ ಕುಸಿದಿದೆ. ಎರಡು ತೆಂಗಿನ ಮರ ಹಾಗೂ ಆರು ಮರ ಮರ ಸಮುದ್ರಪಾಲಾಗಿವೆ.
ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲೂ ಅಲೆಗಳ ಅಬ್ಬರ:
ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಪ್ರವಾಸಿಗರನ್ನು ನೀರಾಟವಾಡಲು ಬಿಡುತ್ತಿರಲಿಲ್ಲ. ಹವಾಮಾನ ಇಲಾಖೆಯ ಮುನ್ಸೂ ಚನೆಯ ಪ್ರಕಾರ ಜೂ. 13ರಂದು ಮುಂಗಾರು ರಾಜ್ಯ ಕರಾವಳಿ ತೀರಕ್ಕೆ ಅಪ್ಪಳಿಸ ಲಿದ್ದು, ಜಿಲ್ಲೆಯಲ್ಲಿ ಭಾರೀ ಗಾಳಿ ಜತೆ ಮಳೆ ಸುರಿಯುವ ಸಂಭವವಿದೆ.
Comments are closed.