ಮಂಗಳೂರು : ಜೆಪ್ಪು ಮಹಾಕಾಳಿಪಡ್ಪು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಅತ್ತಾವರ ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ ಟಿ.ಕೆ. ಸುಧೀರ್ ಮಾತನಾಡಿ, ಕಳೆದ ೧೭ ವರ್ಷಗಳಿಂದ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುತ್ತಾ ಬಂದಿದ್ದೇವೆ. ಆರ್ಥಿಕವಾಗಿ ತೀರಾ ಬಡವರ ಮಕ್ಕಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಲಿದ್ದಾರೆ. ಉಚಿತವಾಗಿ ಪುಸ್ತಕಗಳನ್ನು ನೀಡಿದರೆ ಮಕ್ಕಳಿಗೆ ಮಾತ್ರವಲ್ಲದೇ ಅವರ ಹೆತ್ತವರಿಗೂ ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ/ ಪಂಗಡ ಘಟಕದ ರಾಜ್ಯ ಸಂಚಾಲಕ ಶ್ರೀ ಟಿ. ಹೊನ್ನಯ್ಯನವರು ಮಾತನಾಡುತ್ತಾ ಮಕ್ಕಳಿಗೆ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮವೆಂಬ ಕೀಳರಿಮೆ ಇರಬಾರದು. ಬಹಳಷ್ಟು ನಮ್ಮ ನೇತಾರರು ಕನ್ನಡ ಮಾಧ್ಯಮದಲ್ಲಿಯೇ ಕಲಿತು ಹೆಸರುವಾಸಿಯಾಗಿದ್ದಾರೆ ಎಂದರು.
ವಾರ್ಡ್ ಅಧ್ಯಕ್ಷರಾದ ಶ್ರೀ ಜಯಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜೀ ಕಾರ್ಪೋರೇಟರ್ ಟಿ.ಕೆ. ಶೈಲಜಾ, ಪಕ್ಷದ ಪ್ರಮುಖರಾದ ಮೊಹಮ್ಮದ್ ನವಾಜ್, ಅಶೋಕ್ ಕುಡುಪಾಡಿ, ಕೀರ್ತಿರಾಜ್, ಬಾಬು ಸುವರ್ಣ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅನಿತಾ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
Comments are closed.