ಕರಾವಳಿ

ಕೋಟ ಸ್ನೇಹಿತರ ಕೊಲೆ; 17 ಆರೋಪಿಗಳು ಕುಂದಾಪುರ ನ್ಯಾಯಾಲಯಕ್ಕೆ ಹಾಜರು

Pinterest LinkedIn Tumblr

ಕುಂದಾಪುರ: ಕೋಟ ಸಮೀಪದ ಮಣೂರಿನಲ್ಲಿ ಜ.26 ರ ತಡರಾತ್ರಿ ನಡೆದ ಭರತ್ ಹಾಗೂ ಯತೀಶ್ ಕಾಂಚನ್ ಎನ್ನುವರ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಆರೋಪಿಗಳನ್ನು ಶನಿವಾರ ಕುಂದಾಪುರದ ಜೆ‌ಎಂಎಫ್‌ಸಿ ನ್ಯಾಯಾಲಾಯಕ್ಕೆ ಹಾಜರುಪಡಿಸಲಾಯಿತು. ಪ್ರಥಮ ನ್ಯಾಯಿಕ ದಂಡಾಧಿಕಾರಿ ನ್ಯಾಯಮೂರ್ತಿಗಳಾದ ನಾಗಲಕ್ಷ್ಮಮ್ಮ ವಾದ ವಿವಾದ ಆಲಿಸಿದರು.

ಈ ವೇಳೆ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ಆರೋಪಿಗಳ ಪೈಕಿ ಪವನ್ ಅಮೀನ್, ತೌಸಿಫ್ ಹಾಗೂ ಸಂತೋಷ್ ಕುಂದರ್‌ಗೆ ಜಾಮೀನು ನೀಡಬೇಕು ಎನ್ನುವ ಕುರಿತು ಸುದೀರ್ಘವಾದ ವಾದ ಮಂಡಿಸಿದರು. ಇದಕ್ಕೆ ಸರಕಾರಿ ಸಹಾಯಕ ಅಭಿಯೋಜಕಿ ಸುಮಂಗಲಾ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ವಿಚಾರಣೆ ಜೂ. 17 ರಂದು ನಡೆಯಲಿದೆ.

ಪ್ರಕರಣದ ಪ್ರಮುಖ ಆರೋಪಿ ರೆಡ್ಡಿ ಸೋದರರಾದ ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ, ಚಂದ್ರಶೇಖರ ರೆಡ್ಡಿ, ರತೀಶ್ ಎಂ. ಕರ್ಕೇರಾ, ಒಳಸಂಚು ನಡೆಸಿದ ಆರೋಪ ಹೊತ್ತಿರುವ ರಾಘವೇಂದ್ರ ಕಾಂಚನ್, ಸಹಕರಿಸಿದ ಆರೋಪದಲ್ಲಿ ಡಿ.ಎ.ಆರ್. ಪೊಲೀಸ್ ಸಿಬಂದಿಯಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ, ವಿದ್ಯಾರ್ಥಿ ಪ್ರಣವ್ ರಾವ್, ಮಹಮ್ಮದ್ ತೌಸೀಪ್, ಹಾಗೂ ಪ್ರಕರಣದಲ್ಲಿ ಭಾಗಿಯಾದ ಮಹೇಶ್, ಮೆಡಿಕಲ್ ರವಿ, ರವಿಚಂದ್ರ, ಅಭಿ ಪಾಲನ್, ಸಂತೋಷ್ ಕುಂದರ್, ನಾಗರಾಜ, ಸುಜಯ್, ಶಂಕರ ಮೊಗವೀರ ಅವರನ್ನು ಹಾಜರುಪಡಿಸಲಾಯಿತು.

Comments are closed.