ಕರಾವಳಿ

ಸಿಪಿಎಂ ಹಿರಿಯ ಮುಖಂಡ, ಕಾರ್ಮಿಕ ಚಳುವಳಿಯ ಮುಂಚೂಣಿ ಹೋರಾಟಗಾರ ಬಿ.ಮಾಧವ ನಿಧನ

Pinterest LinkedIn Tumblr

ಮಂಗಳೂರು,ಜೂನ್.19: ಕಾರ್ಮಿಕ ಚಳುವಳಿಯ ಹಿರಿಯ ನಾಯಕರೂ,ಅಖಿಲ ಭಾರತ ಮುಖಂಡರೂ,ವಿಧ್ಯಾರ್ಥಿ ಯುವಜನ ಮಹಿಳಾ ಚಳುವಳಿಯ ಮಾರ್ಗದರ್ಶಕರಾದ ಬಿ.ಮಾಧವರವರು(83ವರ್ಷ) ಇಂದು ಮುಂಜಾನೆ ದೀರ್ಘ ಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.

ಹಿರಿಯ ಸಿಪಿಎಂ ಮುಖಂಡ, ಸಿಐಟಿಯು ರಾಜ್ಯಾಧ್ಯಕ್ಷ ಕಾರ್ಮಿಕ ಸಂಘಟನೆಯ ಮುಂಚೂಣಿ ಹೋರಾಟಗಾರರು ಆಗಿದ್ದ ಬಿ.ಮಾಧವ ಅವರು ಬುಧವಾರ ಮುಂಜಾನೆ ಪಡೀಲು ಸಮೀಪದ ಮೇಘ ನಗರದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಮೂವರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಿಪಿಎಂ ಪಕ್ಷ ಮತ್ತು ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅವರು ವಿಮಾ ನೌಕರರ ಸಂಘಟನೆಯ ಜೊತೆಗೆ ದ.ಕ.ಜಿಲ್ಲಾ ಹಂಚು ಕಾರ್ಮಿಕ ಸಂಘ, ದ.ಕ.ಜಿಲ್ಲಾ ಮೋಟಾರ್ ಟ್ರಾನ್ಸ್‌ಪೋರ್ಟ್ ಆಯಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್, ದ.ಕ.ಜಿಲ್ಲಾ ಬೀಡಿ ಕಾರ್ಮಿಕ ಫೆಡರೇಶನ್ ಹಾಗೂ ಜಿಲ್ಲಾ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘದಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು ಗಮನ ಸೆಳೆದರು. ಹೆಂಚು ಕಾರ್ಮಿಕರ, ಮೋಟಾರ್ ಇಂಜಿನಿಯರಿಂಗ್ ಕಾರ್ಮಿಕರ, ಬೀಡಿ ಕಾರ್ಮಿಕರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಹೋರಾಟಗಳನ್ನು ಮುನ್ನಡೆಸಿದ್ದಲ್ಲದೆ, ಈ ಕಾರ್ಮಿಕ ವರ್ಗದ ಜನರಿಗೆ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೈಜ್ಞಾನಿಕ ಸಮಾಜವಾದ, ಮಾರ್ಕ್ಸ್‌ವಾದ, ಆಧುನಿಕ ಕನ್ನಡ ಸಾಹಿತ್ಯಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಬಿ.ಮಾಧವ 1970ರಲ್ಲಿ ಸ್ಥಾಪನೆಗೊಂಡ ‘ಸಮುದಾಯ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ಉಪಾಧ್ಯಕ್ಷರಾಗಿದ್ದರು. ಇಎಂಎಸ್ ನಂಬೂದಿರಿಪಾದ್, ಎ.ಕೆ.ಗೋಪಾಲನ್, ಲೆನಿನ್ ಮೊದಲಾದವರ ಪುಸ್ತಕಗಳನ್ನು ಮಲಯಾಳ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಲ್ಲದೆ ಭಾರತದ ಸಮಕಾಲೀನ ರಾಜಕೀಯ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಹಲವಾರು ಲೇಖನಗಳನ್ನೂ ಬರೆದಿದ್ದರು.

ಮಾಧವರ ಮಾರ್ಗದರ್ಶನದಲ್ಲಿ ಸಮುದಾಯ, ಭಾರತ ವಿದ್ಯಾರ್ಥಿ ಫೆಡರೇಶನ್, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ ಮತ್ತಿತರ ಸಂಘಟನೆಗಳ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು. 1988ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಶೈಕ್ಷಣಿಕ ಪ್ರವಾಸಕ್ಕಾಗಿ ಹೋದ ಸಿಐಟಿಯು ತಂಡದ ಸದಸ್ಯರಾಗಿದ್ದರು. ಅಲ್ಲದೆ ಕಟ್ಟಡ ಕಾರ್ಮಿಕ ಸಂಘಟನೆಯ ಅಖಿಲ ಭಾರತ ತಂಡದ ಸದಸ್ಯರಾಗಿ 2011ರಲ್ಲಿ ಜಪಾನಿಗೂ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಜೀವ ವಿಮಾ ನಿಗಮದ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದ ಅವರು ಸುಮಾರು 20 ವರ್ಷಗಳಿಂದ ಸಿಪಿಎಂ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಸಿಐಟಿಯು ದ.ಕ.ಜಿಲ್ಲಾ ಸಮಿತಿ ಮುಖಂಡತ್ವದ ಬಳಿಕ ಅವರಿಗೆ ಒದಗಿ ಬಂದ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಸಿದರು. ಸಿಐಟಿಯು ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಖಿಲ ಭಾರತ ಬೀಡಿ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿ, ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘದ ಅಖಿಲ ಭಾರತ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿಯೂ ಸಮರ್ಥವಾಗಿ ಸಂಯೋಜಿಸಿದ್ದರು.

ಸಿಪಿಎಂ ಪಕ್ಷದ ದ.ಕ.ಜಿಲ್ಲಾ ಸಮಿತಿ ಸದಸ್ಯ ಸ್ಥಾನದಿಂದ 2008ರಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಕೊಡುಗ ನೀಡಿದ್ದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ ರಾಜ್ಯ ಚಳುವಳಿಯಲ್ಲಿ ಶಿಕ್ಷಣ, ತರಬೇತಿ, ಪತ್ರಿಕೆಗಳ ಜವಾಬ್ದಾರಿ ವಹಿಸಿದ್ದರು.

ಮನೆಯಲ್ಲಿ ಸಾರ್ವಜನಿಕ ದರ್ಶನ  :

ಬಿ.ಮಾಧವ ಅವರ ಅವರ ಪಾರ್ಥಿವ ಶರೀರ ಇಂದು ಮದ್ಯಾಹ್ನ 2.30ರವರೆಗೆ ಮನೆಯಲ್ಲಿ (ಒಂದನೇ ಅಡ್ಡರಸ್ತೆ,ಮೇಘನಗರ, ಪಡೀಲ್) ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಬಳಿಕ ಬಳಿಕ 3ರಿಂದ 4 ಗಂಟೆಯವರೆಗೆ ಬೋಳಾರದಲ್ಲಿರುವ CPIM ಕಚೇರಿ AKG ಭವನ ದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಇಡಲಾಗಿತ್ತು. ಬಳಿಕ ಸಂಜೆ ನಂದಿಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆಯಿತು.

Comments are closed.