ಕರಾವಳಿ

ಗೋ ಸಾಗಾಟ ವಿವಾದದ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ: ಜಿಲ್ಲೆಯ ಹಲವೆಡೆ ಬಿಗು ಬಂದೋಬಸ್ತ್

Pinterest LinkedIn Tumblr

ಮಂಗಳೂರು / ವಿಟ್ಲ , ಜೂನ್.25: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಸಾಗಾಟ ವಿವಾದದ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರ್, ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟು ನಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ಕಳೆದ ರಾತ್ರಿಯಿಂದೀಚೆಗೆ ಒಟ್ಟು 9 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಸರಕಾರಿ ಮತ್ತು ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರಲ್ಲಿ ವಾಹನ ಚಾಲಕರು ಮತ್ತು ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ ತೆರಳುವ ಸೆಲಿನಾ ಹಾಗೂ ಸೇಪ್ವೇ ಸೇರಿದಂತೆ ಮೂರು ಖಾಸಗಿ ಬಸ್ ಗಳ ಮೇಲೆ ಕಲ್ಕು ತೂರಾಟ ನಡೆದಿದ್ದು, ಘಟನೆಯಲ್ಲಿ ಬಸ್ ಗಳ ಗಾಜು ಸಂಪೂರ್ಣ ಧ್ವಂಸಗೊಂಡಿದೆ. ದ.ಕ ಜಿಲ್ಲಾ ವಿಟ್ಲ ಮತ್ತು ಬಂಟ್ವಾಳ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 9 ಬಸ್ಸುಗಳಿಗೆ ಕಲ್ಲು ಬಿಸಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು. ಕೆಲವು ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿರುವುದಾಗಿ ಹೇಳಲಾಗಿದೆ.

ಸೋಮವಾರ ಕೇರಳ ಭಾಗದ ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪ್ರಖಂಡದ ಭಜರಂಗ ದಳದ ಮುಖಂಡ ಅಕ್ಷಯ್ ರಜಪೂತ್ ಸೇರಿದಂತೆ ಹಲವು ಮಂದಿ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ನಾಗರಿಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಸದ್ಯದಲ್ಲೇ ಇಂತಹ ಸಮಾಜವಿರೋದಿ ಚಟುವಟಿಕೆ ಮಾಡುತ್ತಿರುವ ಇಂತಹ ಕಿಡಿಗೇಡಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಂಟ್ವಾಳದಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

ಈ ಘಟನೆಗಳ ಬಗ್ಗೆ ಪೋಲೀಸರು ತನಿಖೆ ನಡೆಸುತಿದ್ದಾರೆ. ಅತೀ ಶೀಘ್ರದಲ್ಲಿ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರ ತಂಡ ರಚನೆ ಮಾಡಿದ್ದು ಸಾರ್ವಜನಿಕರು ವಿಷಯದ ಬಗ್ಗೆ ಯಾವುದೇ ಆತಂಕಕ್ಕೊಳಗಾಗಬಾರದಾಗಿ ಹಾಗೂ ಇಲ್ಲಸಲ್ಲದ ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳಿಗೆ ಕಿವಿಕೊಡದಂತೆ ಸೂಚಿಸಿರುವ ಎಸ್ಪಿಯವರು ಈ ಪ್ರಕರಣದ ಬಗ್ಗೆ ಬಂಟ್ವಾಳ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.