ಮಂಗಳೂರು,ಜೂನ್. 28 ನಗರದ ಗ್ರಾಮಾಂತರ ಠಾಣಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೂರಿನ ಉಳಾಯಿಬೆಟ್ಟು ಸಮೀಪದಲ್ಲಿ ಎರಡು ತಿಂಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣ ಹಾಗೂ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬನನ್ನು ದಕ್ಷಿಣ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಅನ್ಸರ್ ಉಳಾಯಿಬೆಟ್ಟು ಎಂದು ಗುರುತಿಸಲಾಗಿದೆ. ಈತ ಕೆಲವು ಸಮಯದಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಉಳಾಯಿಬೆಟ್ಟುವಿನಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಅನ್ಸರ್ ಮಲ್ಲೂರಿನಲ್ಲಿ ಎರಡು ತಿಂಗಳ ಹಿಂದೆ ಉದ್ದಬೆಟ್ಟುವಿನ ದಾವುದ್ ಅಲಿ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಝಾಮ್ (23) ಎಂಬಾತನನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು.
ರೌಡಿ ಅನ್ಸರ್ ಮೇಲೆ ಈ ಪ್ರಕರಣವಲ್ಲದೆ ಮಂಗಳೂರು ಗ್ರಾಮಾಂತರ ಠಾಣೆಯೊಂದರಲ್ಲೇ ದನಕಳ್ಳತನ, ಕೊಲೆಯತ್ನ ಸೇರಿದಂತೆ ಕಳೆದ 7 ವರ್ಷಗಳಿಂದ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
Comments are closed.