ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಸೋತರೆ ಕುದ್ರೋಳಿ ಕ್ಷೇತ್ರ ಸೇರಿದಂತೆ ಮಸೀದಿ, ಚರ್ಚ್‌ಗಳಿಗೆ ತಾನು ಭೇಟಿ ನೀಡುವುದಿಲ್ಲ ಎಂದು ಚುನಾವಣಾ ಸಂದರ್ಭ ಶಪಥ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಇದೀಗ ತಮ್ಮ ಶಪಥವನ್ನು ಮುರಿದಿದ್ದಾರೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ರವಿವಾರ ಸಂಜೆ ಪೂಜಾರಿ ಭೇಟಿ ನೀಡುವ ಮೂಲಕ ಲೋಕಸಭಾ ಚುನಾವಣೆ ಸಂದರ್ಭ ಮಾಡಿದ್ದ ತಮ್ಮ ವಚನವನ್ನು ಮುರಿದಿದ್ದಾರೆ.
ಜೂನ್ 30ರಂದು ಕುದ್ರೋಳಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಪೂಜಾರಿಯವರು ದೇವರ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದೇನೆ, ತನ್ನನ್ನು ಮನ್ನಿಸು ಎಂದು ಶ್ರೀ ಗೋಕರ್ಣನಾಥ ದೇವರಲ್ಲಿ ಕ್ಷಮೆಯಾಚಿಸಿದ್ದಾರೆ.
ಮಿಥುನ್ ರೈ ಪರ ನಗರದ ಪುರಭವನದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ಸಂದರ್ಭ ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲ್ಲದಿದ್ದರೆ ನಾನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಸೀದಿ ಹಾಗೂ ಚರ್ಚ್ ಗಳಿಗೆ ಹೋಗುವುದಿಲ್ಲ ಎಂದು ಪೂಜಾರಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಸ್ಫರ್ಧಿಸಿದ್ದ ಮಿಥುನ್ ರೈ ಸೋಲು ಕಂಡಿದ್ದರು.
ಇದೀಗ ತಮ್ಮ ವಚನ ಮುರಿದ ಜನಾರ್ಧನ ಪೂಜಾರಿಯವರು ಮೂರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಗೋಕರ್ನನಾಥ ಸ್ವಾಮಿಯಲ್ಲಿ ತನ್ನನ್ನು ಕ್ಷಮಿಸು ಎಂದು ನಿವೇದಿಸಿಕೊಂಡಿದ್ದಾರೆ. ಇದೇ ವೇಳೆ ಈ ರೀತಿ ಕ್ಷಮೆಯಾಚಿಸುವಂತೆ ತನಗೆ ದೇವರ ಪ್ರೇರಣ ಆಗಿದೆ ಎಂದು ಪೂಜಾರಿ ಹೇಳಿದರು.
Comments are closed.