ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ರವಿವಾರ ಆಸ್ಪತ್ರೆಗೆ ಭೇಟಿ ನೀಡಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಗಂಬಿಲದ ನಿವಾಸಿ ಕಾರ್ಕಳ ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು.
ಈ ವೇಳೆ ಯುವತಿಯ ಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆ ಕಳೆದ ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಆಸ್ಪತ್ರೆಯಲ್ಲಿರುವ ಆಕೆಯ ಸಂಬಂಧಿಕರು ಸಚಿವರಲ್ಲಿ ತಿಳಿಸಿದ್ದಾರೆ.
ಯುವತಿಯ ಪೋಷಕರಿಗೆ ಸಮಾಧಾನ ಹೇಳಿದ ಖಾದರ್ ವೈಯಕ್ತಿಕವಾಗಿ ಸಹಾಯಧನ ನೀಡಿದರು. ಯುವತಿ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ ಅವರು, ಕ್ಲಪ್ತ ಸಮಯಕ್ಕೆ ಆಸ್ಪತ್ರೆ, ವೈದ್ಯರ ತಂಡ ಹಾಗೂ ಪ್ರಮುಖವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ನಿಮ್ಮಿ ಹಾಗೂ ಆಂಬ್ಯುಲೆನ್ಸ್ ಚಾಲಕ ಪ್ರವೀಣ್ ಅವರಿಗೆ ಅಭಿನಂದಿಸಿದರು.ಮಾತ್ರವಲ್ಲದೇ ಆಸ್ಪತ್ರೆ ನರ್ಸ್‍ಗೆ ಶೌರ್ಯ ಪ್ರಶಸ್ತಿ ದೊರಕಿಸುವ ಭರವಸೆ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾದಕ ವ್ಯಸನ ಜಿಲ್ಲೆಯಲ್ಲಿ ವ್ಯಾಪಕವಾಗಿದೆ ಎಂಬ ಖೇದವಿದೆ. ನಿಯಂತ್ರಣಕ್ಕೆ ಕ್ರಮ ನಿರಂತರವಾಗಿದ್ದರೂ, ಮುಂದುವರಿಯುತ್ತಲೇ ಇದೆ. ಪೊಲೀಸ್ ಇಲಾಖೆಗೆ ಇನ್ನಷ್ಟು ಒತ್ತಡ ಹಾಕಲಾಗುವುದು. ಇಂತಹ ವ್ಯಸನದಿಂದಲೇ ದೀಕ್ಷಾ ಮೇಲೆ ದಾಳಿಯಾಗಿರುವ ಸಾಧ್ಯತೆ ಇದೆ. ದೇವರ ದಯೆಯಿಂದ ಆಕೆ ಬದುಕಿ ಬರಬೇಕೆಂಬುದು ಎಲ್ಲರ ಆಶಯ. ಆರೋಪಿ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ. ಆತನ ಮೇಲೆ ಕಠಿಣ ಕಾನೂನು ಕ್ರಮ ಜರಗಿಸುವ ವಿಶ್ವಾಸ ಪೊಲೀಸ್ ಇಲಾಖೆಯಿಂದ ದೊರೆತಿದೆ ಎಂದು ಹೇಳಿದರು.
Comments are closed.