ಮಂಗಳೂರು, ಜುಲೈ 05 : ಜೂನ್ 28ರಂದು ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಪಾಗಲ್ ಪ್ರೇಮಿಯಿಂದ ಚೂರಿ ಇರಿತಕ್ಕೊಳ ಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಗಂಬಿಲದ ನಿವಾಸಿ ಕಾರ್ಕಳ ಖಾಸಗಿ ಕಾಲೇಜು ವಿದ್ಯಾರ್ಥಿನಿ ದೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ದೀಕ್ಷಾ ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡುಬರುತ್ತಿದೆ ಎಂದು ಆಸ್ಪತ್ರೆಯಲ್ಲಿರುವ ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬರುತ್ತಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹದಿನೈದು ಎಂ.ಎಲ್ ನಷ್ಟು ನೀರು ಕುಡಿಸಲಾಗಿದೆ. ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಚೇತರಿಸಿಕೊಂಡಿರುವ ಕಾರಣದಿಂದ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗುರುವಾರ ದಾದಿಯರ ಮಾತಿಗೆ ಸ್ಪಂದಿಸಿ ಮಾತನಾಡುವ ಪ್ರಯತ್ನ ಮಾಡಿದ್ದಾಳೆ. ಇದರಿಂದ ಕುಟುಂಬಸ್ಥರಲ್ಲಿ ಆಶಾಭಾವನೆ ಮೂಡಿಸಿದೆ. ಆಕೆಗೆ ಎಡಗೈ ಪ್ಲಾಸ್ಟಿಕ್ ಸರ್ಜರಿ ಬಾಕಿಯುಳಿದಿದೆ ಎಂದು ತಿಳಿದುಬಂದಿದೆ.
ಕಾರ್ಕಳದಲ್ಲೇ ಇದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ಎಂಬಿಎ ಕಲಿಯುತ್ತಿರುವ ದೀಕ್ಷಾ (22) ಕಳೆದ ಶುಕ್ರವಾರ ಸಂಜೆ ಊರಿಗೆ ಆಗಮಿಸಿದ್ದು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿ ಬಸ್ಸಿನಿಂದ ಇಳಿದು ಬಗಂಬಿಲದ ಮನೆ ಕಡೆ ತೆರಳುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ಸುಶಾಂತ್ ಮನೆಯಿಂದ ಅನತಿ ದೂರದಲ್ಲಿ ಆಕೆಯನ್ನು ಅಡ್ಡಗಟ್ಟಿ ಚೂರಿ ಯಿಂದ 12 ಬಾರಿ ಇರಿದಿದ್ದಾನೆ. ಬಳಿಕ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಸ್ಪತ್ರೆ ಸಿಬಂದಿ, ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.
ಇನ್ನು ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ತಾನೂ ಕತ್ತೂ ಸೀಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಯುವಕನನ್ನು ಅದೇ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿರಿಸಿ ಪೊಲೀಸ್ ಬಂದೋಬಸ್ತಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುಣಮುಖನಾದರೆ ಪೊಲೀಸ್ ವಶಕ್ಕೆ ಪಡೆದು ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ.
ಹೋಂಸ್ಟೇ ದಾಳಿ ಆರೋಪಿ ಸುಶಾಂತ್ ರೌಡಿಶೀಟರ್ :
ಸಣ್ಣಪುಟ್ಟ ಗಲಾಟೆಗಳಲ್ಲಿ ಭಾಗವಹಿಸುತ್ತಿದ್ದ ಸುಶಾಂತ್ ಜಪಾನ್ ಮಂಗ ಯಾನೆ ರಾಜೇಶ್ನ ಸ್ನೇಹಿತನಾಗಿದ್ದ. 2016ರಲ್ಲಿ ಹೋಂಸ್ಟೇ ದಾಳಿಯಲ್ಲಿ ಆರೋಪಿಯಾಗಿದ್ದ ಸುಭಾಷ್ ಪಡೀಲ್ ಮತ್ತು ಆತನ ತಂಡದ ಸದಸ್ಯರೊಂದಿಗೆ ನ್ಯಾಯಾಲಯದ ಆವರಣದಲ್ಲಿ ಜಪಾನ್ ಮಂಗ ಯಾನೆ ರಾಜೇಶ್ ನೇತೃತ್ವದಲ್ಲಿ ನಡೆದ ಹೊಡೆದಾಟ ಪ್ರಕರಣ ಮತ್ತು ಚೂರಿ ಇರಿತ ಪ್ರಕರಣದಲ್ಲಿ ಜಪಾನ್ ಮಂಗನನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಹೋಗುವಲ್ಲಿ ಇದೇ ಸುಶಾಂತ್ ಭಾಗಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಧಿತನಾಗಿ ಜೈಲು ಪಾಲಾಗಿದ್ದ. ಈ ಸಂದರ್ಭದಲ್ಲಿ ಬಂದರು ಠಾಣೆಯಲ್ಲಿ ಸುಶಾಂತ್ ವಿರುದ್ಧವೂ ರೌಡಿಶೀಟರ್ ಹಾಕಲಾಗಿತ್ತು. ಈ ಘಟನೆಯ ಬಳಿಕವೂ ದೀಕ್ಷಾ ಆತನನ್ನು ದೂರ ಮಾಡಿದ್ದು, ಅ ಕಾರಣಕ್ಕೂ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಡ್ಯಾನ್ಸ್ ತರಗತಿಯಲ್ಲಿ ದೀಕ್ಷಾಳ ಪರಿಚಯ :
ಸುಶಾಂತ್ ಶಾಲೆ ಕಾಲೇಜುಗಳಿಗೆ ಬ್ರೇಕ್ ಡ್ಯಾನ್ಸ್ ಕಲಿಸಲು ಹೋಗುತ್ತಿದ್ದು, ದೀಕ್ಷಾಳ ಡ್ಯಾನ್ಸ್ಗೆ ಕೊರಿಯೋಗ್ರಫಿ ಮಾಡಿದ್ದ. ಇದೇ ಕಾರಣದಿಂದ ಇಬ್ಬರೂ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಸ್ನಾತಕೋತ್ತರ ಪದವಿಗೆ ಕಾರ್ಕಳಕ್ಕೆ ತೆರಳಿದ ಬಳಿಕ ಯಾಕೋ ಇಬ್ಬರಲ್ಲೂ ವೈಮನಸ್ಸು ಆರಂಭವಾಗಿತ್ತು. ಕೆಲ ತಿಂಗಳ ಹಿಂದೆ ಸ್ನೇಹಿತನೊಂದಿಗೆ ಕಾರಿನಲ್ಲಿ ಕಾರ್ಕಳಕ್ಕೆ ತೆರಳಿದ್ದ ಸುಶಾಂತ್ ದಿಕ್ಷಾಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲಾತ್ಕರಿಸಿದ್ದು, ಕಾರ್ಕಳ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಠಾಣೆಯಲ್ಲೇ ಕುಳ್ಳಿರಿಸಿ ಹೆತ್ತವರ ಎದುರು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು. ಇದೇ ಕಾರಣದಿಂದ ದೀಕ್ಷಾಳನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
Comments are closed.