ಮಂಗಳೂರು,ಜುಲೈ.06 : ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ‘ಮಾರ್ಚ್ 22’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಿತ್ರ ಮತ್ತು “ಇಂಗ್ಲೀಷ್” ತುಳು ಚಿತ್ರದ ನಿರ್ಮಾಪಕರೂ ಆಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ, ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಬಹುನಿರೀಕ್ಷಿತ “ಯಾನ” ಕನ್ನಡ ಚಿತ್ರ ಜುಲೈ 12ರ ಶುಕ್ರವಾರದಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ತಿಳಿಸಿದ್ದಾರೆ.
ನಗರದ ಕೆ.ಎಸ್.ರಸ್ತೆಯಲ್ಲಿರುವ ಸಾಯಿ ಪ್ಯಾಲೇಸ್ ಹೋಟೆಲ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ವಿಭಿನ್ನ, ವಿಶೇಷ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾದಲ್ಲಿ ಬಹುಕಾಲದ ನಂತರ ಕನ್ನಡ ಹಿರಿಯ ನಟ ಅನಂತ್ ನಾಗ್ ಹಾಗೂ ಸುಹಾಸಿನಿ ಜೋಡಿ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ ಎಂದು ಹೇಳಿದರು.
ಚಿತ್ರದ ಕಥೆ ವಿಭಿನ್ನವಾಗಿದೆ. ಇಂದಿನ ಯುವಪೀಳಿಗೆಯನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿದ್ದು, ಯುವಕ-ಯುವತಿಯರಿಗೆ ಸಿನೆಮಾ ಮೆಚ್ಚಿಗೆಯಾಗಲಿದೆ. ನಟ ಜೈಜಗದೀಶ್ ಹಾಗು ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ‘ಯಾನ’ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯಿಸಿದ್ದಾರೆ.. ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಗೋವಾ, ಉತ್ತರಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ಹರೀಶ್ ಶೇರಿಗಾರ್ ಹೇಳಿದರು.
ಹಿರಿಯ ನಟ ಜೈಜಗದೀಶ್ ಅವರು ಮಾತನಾಡಿ, ಚಿತ್ರದಲ್ಲಿ ತನ್ನ ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ನಾಯಕಿಯರಾಗಿ ನಟಿಸಿದ್ದು, ಇವರಿಗೆ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದ ಹಾಟ್ ಫೇವರಿಟ್ ಜೋಡಿ ಅನಂತ್ ನಾಗ್ ಮತ್ತು ಸುಹಾಸಿನಿ ಈ ಸಿನೆಮಾದಲ್ಲಿ ಒಂದಾಗಿರುವುದು ಸಿನೆಮಾಕ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.ಹೊಸ ನೀರು ಚಿತ್ರದಲ್ಲಿ ಅನಂತ್ ನಾಗ್ ಮತ್ತು ಸುಹಾಸಿನಿ ಈ ಜೋಡಿ ಪ್ರೇಕ್ಷ ಕರಿಗೆ ಮೋಡಿ ಮಾಡಿತ್ತು. ಆನಂತರ ಇಬ್ಬರೂ ಎಂಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಯಾನ ಇವರ ಒಂಭತ್ತನೇ ಚಿತ್ರವಾಗಿದೆ.
ಇನ್ನುಳಿದಂತೆ ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಗಡ್ದಪ್ಪ, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರು ನಟಿಸಿದ್ದಾರೆ. ವಿಜಯಲಕ್ಷ್ಮೀಸಿಂಗ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ. ಸುನಿ ಹಾಗೂ ಅಭಿಷೇಕ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿದೆ ಎಂದು ಹೇಳಿದರು.
ಈ ಸಿನೆಮಾಗೂ ಮುನ್ನ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ‘ಮಾರ್ಚ್ 22’ ಚಿತ್ರ ನಿರ್ಮಿಸಿದ್ದರು. ಈ ಸಿನೆಮಾಕ್ಕೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರಸಿ ಬಂದಿದ್ದವು. ಜೊತೆಗೆ ಮಾಧ್ಯಮಗಳ ಮೆಚ್ಚುಗೆಯನ್ನು ಗಳಿಸಿತ್ತು. ಅನಂತರ ಅನಂತ್ ನಾಗ್ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನೆಮಾ ನಿರ್ಮಿಸಿದ್ದು, ಅದು ಕೂಡ ಹಿಟ್ ಆಗಿತ್ತು. ಇದೇ ವೇಳೆ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು “ಇಂಗ್ಲೀಷ್” ಎಂಬ ಹೆಸರಿನ ತುಳು ಚಿತ್ರ ನಿರ್ಮಾಣದದಲ್ಲಿ ತೊಡಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸೂರಜ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರ ಇದೇ ಬರುವ ಅಗೋಷ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲ್ಲಿದೆ. ಈ ಚಿತ್ರಕ್ಕೂ ತಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದು ಜೈಜಗದೀಶ್ ಹೇಳಿದರು.
ಚಿತ್ರದ ನಿರ್ದೆಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಮಾತನಾಡಿ, ಹೆಸರೇ ಹೇಳುವಂತೆ ಈ ಚಿತ್ರದಲ್ಲಿ ಟ್ರಾವೆಲ್ ಪ್ರಮುಖ ಅಂಶವಾಗಿದ್ದು, ಅದಕ್ಕೆ ಪೂರಕವಾಗಿ ಕವಿರಾಜ್ ಬರೆದಿರುವ, ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿರುವ “ಗರಿಬಿಚ್ಚಿ ಮರಿಹಕ್ಕಿ ಅದೆಲ್ಲೋ ಹಾರಿ ಹೊಂಟಿವೇ …’ ಎಂಬ ಹಾಡು ಸಿನೆಮಾ ಬಿಡುಗಡೆಗೂ ಮುನ್ನವೇ ಹಿಟ್ ಆಗಿದೆ. ಫ್ಯೂಶನ್ ಶೈಲಿಯಲ್ಲಿರುವ ಈ ಹಾಡು ಲಹರಿ ಸಂಸ್ಥೆಯ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಿತ್ತು. ಚಿತ್ರದ ಹಾಡುಗಳನ್ನು ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯ ಶಿವ, ಶಶಾಂಕ್ ಹಾಗೂ ಚೇತನ್ ಕುಮಾರ್ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದಕ್ಕಿಂತಲೂ ಒಂದು ಹಿಟ್ ಆಗಿದೆ ಎಂದರು.
ಮಲೆಯಾಳಂ ಭಾಷೆಯಲ್ಲೂ ರಿಲೀಸ್:
‘ಯಾನ’ ಚಿತ್ರ ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಕೇರಳದಲ್ಲಿ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ತಮ್ಮ ಮಕ್ಕಳಾದ ವೈಭವಿ, ವೈನಿಧಿ, ವೈಷ್ಣವಿ ನಟನೆಯ ಮೊದಲ ಚಿತ್ರ ಇದು. ‘ಚಿತ್ರದ ಕತೆ ಯೂನಿವರ್ಸಲ್ ಆಗಿದೆ ಎಂಬ ಕಾರಣಕ್ಕೆ ಮಲಯಾಳಂಗೆ ಡಬ್ ಮಾಡಲು ಮುಂದೆ ಬಂದಿದ್ದರು. ಜುಲೈ 12ರೊಳಗೆ ಇದರ ಕೆಲಸ ಮುಗಿಯುತ್ತೆ ಎಂಬ ನಂಬಿಕೆ ಇರಲಿಲ್ಲ. ಡಬ್ಬಿಂಗ್ ಬೇಗ ಮುಗಿಸಿದ್ದಾರೆ. ಕನ್ನಡ ಮತ್ತು ಮಲಯಾಳಂನಲ್ಲಿ ಒಟ್ಟಿಗೆ ತೆರೆಕಾಣುತ್ತಿದೆ’ ಎಂದು ವಿಜಯಲಕ್ಷ್ಮೀ ಸಿಂಗ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚಿತ್ರದ ನಾಯಕಿ ನಟಿಯರಾದ ವೈಭವಿ, ವೈನಿಧಿ, ವೈಸಿರಿ , ನಾಯಕ ನಟರಾದ ಸುಮುಖ, ಚಕ್ರವರ್ತಿ,ಅಭಿಷೇಕ್ ಅವರು ಚಿತ್ರದ ಬಗೆಗಿನ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕಿ ಶ್ರೀಮತಿ ಹರೀಶ್ ಶೇರಿಗಾರ್ ಉಪಸ್ಥಿತರಿದ್ದರು.
__Sathish Kapikad
Comments are closed.