ಮಂಗಳೂರು : ಸಮುದ್ರದಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ರವಿವಾರ ಸಂಜೆ ನಗರದ ಹೊರವಲಯ ಸಸಿಹಿತ್ಲು ಬೀಚ್‌ನಲ್ಲಿ ನಡೆದಿದೆ.
ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಯುವಕರನ್ನು ಬಜ್ಪೆ ಸಿದ್ಧಾರ್ಥ ನಗರ ನಿವಾಸಿ ಸುಜಿತ್ (32) ಹಾಗೂ ಕಾವೂರು ನಿವಾಸಿ ಗುರುಪ್ರಸಾದ್(28) ಎಂದು ಗುರುತಿಸಲಾಗಿದೆ.
ರವಿವಾರ ಸಂಜೆ ನಾಲ್ಕು ಮಂದಿ ಸ್ನೇಹಿತರು ಸುರತ್ಕಲ್ – ಮುಕ್ಕ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ಈಜಲು ಹೋಗಿದ್ದ ಮೂವರಲ್ಲಿ ಇಬ್ಬರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ
ಈ ಯುವಕರು ಸಸಿಹಿತ್ಲು ಬೀಚ್ ಸಮೀಪದ ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದರು ಎನ್ನಲಾಗಿದೆ. ಬಜ್ಪೆ ಯುವ ಟೈಗರ್ ತಂಡದ ಸ್ಪರ್ಧಾಳುಗಳಾದ ಯುವಕರು, ಸ್ಪರ್ಧೆಯ ಮೊದಲನೇ ಸುತ್ತಿನಲ್ಲಿಯೇ ಪರಾಜಯಗೊಂಡಿದ್ದರಿಂದ ನಾಲ್ವರು ಸದಸ್ಯರು ಸಮುದ್ರದ ಬಳಿ ಬಂದು ಈಜಾಡಲು ಸಮುದ್ರಕ್ಕಿಳಿದಿದ್ದರು. ಈ ವೇಳೆ ಈ ಯುವಕರಿಗೆ ಸ್ಥಳೀಯರು ಹಲವು ಬಾರಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಲು ಹೋದ ಮೂವರು ಸಮುದ್ರದ ಅಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೇ ಸ್ಥಳೀಯರಾದ ಗಂಗಾಧರ ಪುತ್ರನ್ ಸಾಹಸ ಮೆರೆದು ಓರ್ವನನ್ನು ರಕ್ಷಿಸಲು ಯಶಸ್ವಿಯಾದರು. ಆದರೆ, ಇನ್ನಿಬ್ಬರು ಯುವಕರು ಕಡಲಿನ ಅಬ್ಬರದೊಂದಿಗೆ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದಾರೆ.
ಬಜ್ಪೆ ಮೂಲದ ಸೃಜನ್ ನನ್ನು ಸ್ಥಳೀಯ ಗಂಗಾಧರ ಪುತ್ರನ್ ಹಾಗೂ ತಂಡದ ಸದಸ್ಯರು ರಕ್ಷಣೆ ಮಾಡಿದ್ದಾರೆ. ಸೃಜನ್ ತೀವ್ರ ಅಸ್ವಸ್ಥನಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ..
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.