ಬೆಂಗಳೂರು: ಬಿಜೆಪಿ ಅವರು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಯತ್ನಿಸುತ್ತಿದ್ದಾರೆ, ಇದು ಅವರ 6 ನೇ ಯತ್ನವಾಗಿದೆ. ಆದರೆ ಬಂಡಾಯವೆದ್ದಿರುವ ನಮ್ಮ ಶಾಸಕರಿಗೆ ಕಾನೂನಿನ ಅರಿವು ಇದೆಯಾ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅತೃಪ್ತರು, ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ, ಅತೃಪ್ತ, ಬಂಡಾಯವೆದ್ದಿರುವ ಶಾಸಕರಿಗೆ ಎಚ್ಚರಿಕೆ ನೀಡಿದ್ದು, ರಾಜೀನಾಮೆ ವಾಪಸ್ ಪಡೆಯದೇ ಇದ್ದರೆ ಸ್ಪೀಕರ್ ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ಬಿಜೆಪಿಯ ರಾಜ್ಯ ನಾಯಕರಷ್ಟೇ ಅಲ್ಲದೇ ಮೋದಿ, ಶಾ ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಯತ್ನಿಸುತ್ತಲೇ ಇದ್ದಾರೆ, ಇದು ಅವರ 6 ನೇ ಪ್ರಯತ್ನವಾಗಿದೆ, ಶಾಸಕರಿಗೆ ಮಂತ್ರಿಗಿರಿ, ಹಣದ ಆಮಿಷವೊಡ್ಡಲಾಗುತ್ತಿದೆ. ಹಣದ ಆಮಿಷವೊಡ್ಡುವುದಕ್ಕೆ ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ ಅಂತ ಕೇಳುತ್ತಲೇ ಇದ್ದೀವಿ. ಇನ್ನು ಬಂಡಾಯವೆದ್ದಿರುವ ನಮ್ಮ ಶಾಸಕರಿಗೆ ಕಾನೂನಿನ ಅರಿವಿದ್ಯಾ? ಬಂಡಾಯವೆದ್ದಿರುವ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ, ಆಮಿಷಕ್ಕೆ ಒಳಗಾಗಿ ಸೂಕ್ತ ಕಾರಣ ಇಲ್ಲದೇ ರಾಜೀನಾಮೆ ನೀಡಿದರೆ ಅವರನ್ನು ಅನರ್ಹಗೊಳಿಸಲು ಶಿಫಾರಸ್ಸು ಮಾಡಬಹುದಾಗಿದೆ. ಅನರ್ಹಗೊಂಡರೆ 6 ವರ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡುತ್ತೇವೆ” ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
Comments are closed.