ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆ : ಆಕಾಶಭವನದಲ್ಲಿ ಭೂಕುಸಿತ – ಮನೆಗಳಿಗೆ ಹಾನಿ

Pinterest LinkedIn Tumblr

ಮಂಗಳೂರು, ಜುಲೈ.11: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ.

ಕರಾವಳಿಯಲ್ಲಿ ದುರ್ಬಲವಾಗಿದ್ದ ಮುಂಗಾರು ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗುತ್ತಿದ್ದು, ನಗರದ ಆಕಾಶಭವನ ಸಮೀಪ ಲಘು ಭೂಕುಸಿತ ಸಂಭವಿಸಿದೆ. ಭಾರೀ ಮಳೆಗೆ ಭೂ ಕುಸಿತ ಉಂಟಾಗಿದ್ದು ತಡೆಗೋಡೆ ಕುಸಿದು ಬಿದ್ದಿದೆ. ಇದರಿಂದ ಪಕ್ಕದ ಮನೆಗಳಿಗೆ ಹಾನಿಯಾಗಿದೆ.

ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ತುರ್ತಾಗಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆದಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ.

ಕರಾವಳಿಯಲ್ಲಿ ದುರ್ಬಲವಾಗಿದ್ದ ಮುಂಗಾರು ಚುರುಕುಗೊಂಡಿದೆ. ಕರಾವಳಿಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳೂರು – ಉಡುಪಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಳೆ ಹಿನ್ನಲೆ, ರಕ್ಷಣಾ ತಂಡಗಳು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಮಳೆಯಾಗುತ್ತಿರುವ ಹಿನ್ನಲೆ ಬೀಚ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಪಣಂಬೂರು, ತಣ್ಣೀರು ಬಾವಿ ಬೀಚ್‌ನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕಳೆದ 2 ತಿಂಗಳಿನಿಂದ ಪ್ರವಾಸಿಗರನ್ನು ಸಮುದ್ರದ ಬಳಿ ಬಿಡುತ್ತಿಲ್ಲ ಎಂದು ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

Comments are closed.