ಮಂಗಳೂರು : ನಗರದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್) ಹಾಸ್ಟೆಲ್‌ಗಳು ಹಾಗೂ ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ಅನುಮತಿ ಕಡ್ಡಾಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ನಿಗಾ ವಹಿಸಿರುವ ಮಂಗಳೂರು ಪೊಲೀಸ್ ಆಯುಕ್ತರು ಇದೀಗ ಇದರ ಜತೆಯಲ್ಲೇ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳ ಆದೇಶವನ್ನು ನೀಡಿದ್ದಾರೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ರವರು, ತಮ್ಮ ಆದೇಶದಲ್ಲಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಹಾಸ್ಟೆಲ್, ಪೇಯಿಂಗ್ ಗೆಸ್ಟ್‌ಗಳು ಹಾಗೂ ಸರ್ವಿಸ್ ಅಪಾರ್ಟ್‌ಮೆಂಟ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲಕರು, ಪಾಲುದಾರರು ಹಾಗೂ ಆಡಳಿತ ಮಂಡಳಿಯವರು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿಯನ್ನು ಪಡೆಯಬೇಕೆಂದು ತಿಳಿಸಿದ್ದಾರೆ.
ಆಯುಕ್ತರ ಆದೇಶದಂತೆ, ಈ ಸಂಸ್ಥೆಗಳ ಮಾಲಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು.
ವಾಸ್ತವ್ಯವಿರುವ ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ ಹಾಗೂ ಗುರುತಿನ ಚೀಟಿಯನ್ನು ಠಾಣೆಗೆ ನೀಡಬೇಕು. ವಿದೇಶದ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ವಾಸ್ತವ್ಯವಿದ್ದಲ್ಲಿ ಅವರು ವಾಸ್ತವ್ಯಕ್ಕೆ ಬಂದ 15 ದಿನಗಳ ಒಳಗೆ ಅವರ ಪೂರ್ಣ ಮಾಹಿತಿಯೊಂದಿಗೆ ಪಾಸ್‌ಪೋರ್ಟ್ ಹಾಗೂ ಅವರು ಹೊಂದಿರುವ ವೀಸಾದ ವಿವರಗಳನ್ನು ಠಾಣೆಗೆ ಸಲ್ಲಿಸಬೇಕು.
ವಾಸ್ತವ್ಯ ತೆರವುಗೊಳಿಸಿದಾಗಲೂ ವಿವರಗಳನ್ನು ಠಾಣಾಧಿಕಾರಿಗೆ ಸಲ್ಲಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು. ಒಂದು ಸಿಸಿಟಿವಿ ಮುಖ್ಯ ಪ್ರವೇಶದ್ವಾರಕ್ಕೆ/ ರಸ್ತೆಗೆ ಮುಖ ಮಾಡಿರುವಂತೆ ಅಳವಡಿಸಬೇಕು. ಸಿಸಿಟಿವಿಗಳ ಫೂಟೇಜ್‌ಗಳು ಕನಿಷ್ಠ 30 ದಿನಗಳ ಅವಧಿಗೆ ವೀಕ್ಷಣೆಗೆ ಲಭ್ಯವಿರುವಂತೆ ಡಿವಿಆರ್‌ಗಳಿಗೆ ದಾಸ್ತಾನು ಮಾಡಿಕೊಳ್ಳುವುದು ಹಾಗೂ ಠಾಣಾಧಿಕಾರಿಗಳು ವಿವರ ಕೇಳಿದಾಗ ಮಾಹಿತಿ ಸಲ್ಲಿಸುವುದು. ಇದರ ಅಳವಡಿಕೆಗೆ 15 ದಿನಗಳ ಕಾಲಾವಕಾಶವನ್ನು ಅವರು ನೀಡಿದ್ದಾರೆ.
ಅಪರಿಚಿತರಿಗೆ ಪ್ರವೇಶ ನಿಯಂತ್ರಿಸಬೇಕು. ಮಾಲಕರು ಯಾವುದೇ ಅಪರಾಧ ಘಟನೆಗಳು ಅಥವಾ ಡ್ರಗ್ಸ್ ಅಥವಾ ಇತರ ಅನೈತಿಕ ಚಟುವಟಿಕೆಗಳೆ ಆಸ್ಪದವಿಲ್ಲದಂತೆ ಕ್ರಮ ವಹಿಸಬೇಕು. ಶಬ್ಧ ಮಾಲಿನ್ಯ ಉಂಟು ಮಾಡುವ ಯಾವುದೇ ಕಾರ್ಯಕ್ರಮ ಅಥವಾ ಸಂಸ್ಥೆಗಳ ಪರವಾನಿಗೆ ವ್ಯಾಪ್ತಿಗೆ ಬಾರದ ಇತರ ಯಾವುದೇ ಕಾರ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆಯೂ ಪೊಲೀಸ್ ಆಯುಕ್ತರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
Comments are closed.