ಕುಂದಾಪುರ: ಬೈಂದೂರು ಸಮೀಪ ಹೇನಬೇರು ಹಾಗೂ ಅರೆಹೊಳೆಯಲ್ಲಿ ತ್ಯಾಜ್ಯ ತಿಂದು ಹಸುಗಳ ಸಾವನ್ನಪ್ಪಿದ ಕರಾಳ ನೆನಪು ಹಸಿಯಾಗುರುವಾಗಲೇ ಪ್ರಜ್ಞಾವಂತ ನಾಗರಿಕರ ನಿರ್ಮಾಣ ಮಾಡುವ ಬೈಂದೂರು ಶಿರೂರಿನ ಖಾಸಗಿ ಶಿಕ್ಷಣ ಸಂಸ್ಥೆ ಎಸೆಯುವ ತ್ಯಾಜ್ಯಕ್ಕೆ ಜಾನುವಾರುಗಳ ಸರಣಿ ಸಾವು ನಾಗರಿಕ ಪ್ರಪಂಚದಲ್ಲಿ ತಲ್ಲಣಿಸುವಂತೆ ಮಾಡಿದೆ.
ಬೈಂದೂರು ಭಾಗದಲ್ಲಿ ಮೇಯಲು ಬಿಟ್ಟ ರಾಸುಗಳು ಬಲಿಯಾಗೋದು ಇದೇನು ಮೊದಲಲ್ಲ. ಇತಿಹಾಸ ಕೆದುಕುತ್ತ ಹೊರಟರೆ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳ ಮಾರಣಹೋಮ ನಡೆದೆ ಹೋಗಿದೆ ಎಂದರೆ ತಪ್ಪಾಗಲಾರದು. ಇಲ್ಲಿನ ಹೇನಬೇರು ಪರಿಸರದಲ್ಲಿ ಕಳೆದ ಮೂರು ವರ್ಷದ ಹಿಂದೆ 65ಕ್ಕೂ ಮಿಕ್ಕ ಹಸುಗಳ ತ್ಯಾಜ್ಯಕ್ಕೆ ಬಲಿಯಾದರೆ, ಮರುವರ್ಷ ಮತ್ತೆ ಐದು ಹಸುಗಳು ಸತ್ತುಹೋಗಿದ್ದು, ಅದಕ್ಕೆ ಒತ್ತಿನೆಣೆ ಪರಿಸರದಲ್ಲಿ ಕೋಳಿ ಇನ್ನಿತರ ತ್ಯಾಜ್ಯ ಕಾರಣ ಎಂದು ದೃಢಪಟ್ಟಿತ್ತು. ಅರಹೊಳೆ ಬಳಿ ಜಾನುವಾರುಗಳ ಸಾವಿಗೆ ತ್ಯಾಜ್ಯವೇ ಕಾರಣ ಎಂದು ಪಶುಚಿಕಿತ್ಸಕರು ಕನ್ಪರ್ಮ್ ಮಾಡಿದ್ರು. ಪ್ರಸಕ್ತ ಐದಕ್ಕೂ ಮಿಕ್ಕ ಹಸುಗಳ ಮರಣ ಹಾಗೂ ಎರಡು ಹಸುಗಳ ಗಂಭೀರ ಸ್ಥಿತಿಗೆ ಮತ್ತೆದೇ ತ್ಯಾಜ್ಯ ಕಾರಣವಾಗುತ್ತಿರುವುದು ಪ್ರಾಣಿಗಳ ಜೀವಕ್ಕೆ ಬೆಲೇ ಇಲ್ಲದಂತೆ ಆಗಿದೆ.
ಬೈಂದೂರು ತಾಲೂಕಿನ ಶಿರೂರಿನ ನೀರ್ಗದ್ದೆ ಎಂಬಲ್ಲಿ ಈ ದುರಂತ ನಡೆದಿದೆ. ಈ ಪರಿಸರದ ಮನೆಯೊಂದರ ಜೆರ್ಸಿ ಹಸು ಮೃತಪಟ್ಟಾಗ ಪರಿಸರದ ಜನ ಅಷ್ಟೊಂದು ತೆಲೆ ಕೆಡಿಸಿಕೊಳ್ಳಲಿಲ್ಲ, ನಂತರ ನಡೆದ ಸರಣಿ ಸಾವು ಪರಿಸರದ ನಿವಾಸಿಗಳಲ್ಲಿ ಆತಂಕ ಹುಟ್ಟು ಹಾಕಿದ್ದು, ಶಿಕ್ಷಣ ಸಂಸ್ಥೆ ತ್ಯಾಜ್ಯವೇ ಜಾನುವಾರುಗಳ ಸಾವಿಗೆ ಕಾರಣ ಎಂಬ ಸತ್ಯ ತಿಳಿಯಲಾಯಿತು. ಪರಿಸರದ ಕೃಷಿಕರೊಬ್ಬರ ಮನೆಯ ಮೂರು ಹಸುಗಳ ಒಂದರನಂತರ ಒಂದು ಮೃತಪಟ್ಟಿದ್ದರಿಂದ ಸತ್ತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಹಸುವಿನ ಹೊಟ್ಟೆಯಲ್ಲಿ ಹೇರಳ ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿದ್ದು, ಹಸುಗಳ ಸಾವಿಗೆ ಪ್ಲಾಸ್ಟಿಕ್ ಕಾರಣ ಎಂದು ಪಶು ವೈದ್ಯರು ತಿಳಿಸಿದ ನಂತರ ಹಸುಗಳದ್ದು ಅಸಹಜ ಸಾವು ಎಂದು ಖಾತ್ರಿ ಆಗಿದೆ. ಅಷ್ಟಕ್ಕೂ ಆ ಹಸುವಿನ ಹೊಟ್ಟೆಯಲ್ಲಿ ಬರೋಬ್ಬರಿ ಐದರಿಂದ ಹತ್ತು ಕೇಜಿ ಆಗುವಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕಂಡು ಪಶು ವೈದ್ಯಾಧಿಕಾರಿಗಳೇ ಬೆಚ್ಚಿಬಿದ್ದಿದ್ದರು.
ನೀರ್‍ಗದ್ದೆ ಕೊಡ್ಲುಹಿತ್ಲುಗೆ ಹಸುಗಳು ಮಳೆಗಾದಲ್ಲಿ ಚಿಗುರುವ ಹಸಿರು ತಿನ್ನೋದಕ್ಕೆ ಮಾತ್ರ ಬರೋದಿಲ್ಲ. ನೀರ್‍ಗದ್ದೆ ವಿಶಾಲ ಪ್ರದೇಶದಲ್ಲಿ ಹಸಿರು ಹುಲ್ಲು ಹೇರಳವಾಗಿ ಸಿಗೋದ್ರಿಂದ ನೀರ್‍ಗದ್ದೆ, ಕೊಡ್ಲುಮಕ್ಕಿ ಅಲ್ಲದೆ ಆಚಾರಮಕ್ಕಿ, ಶಿರೂರು ಕಡೆಯಿಂದ ಹಿಂಡು ಹಿಂಡು ಹಸುಗಳು ಬರುತ್ತವೆ. ಕೊಡ್ಲುಮಕ್ಕಿ ಕಾಡಿನ ಮಧ್ಯದಲ್ಲಿ ಚಿಕ್ಕದೊಂದು ಕೆರೆಯಿದ್ದು, ವರ್ಷದ ಅನುದಿನವೂ ನೀರಿರುತ್ತದೆ. ಬೇಸಿಗೆಯಲ್ಲಿ ಸಾಕು ಪ್ರಾಣಿಗಳಲ್ಲದೆ ವನ್ಯ ಜೀವಿಗಳ ನೀರಿನ ದಾಹವನ್ನು ಇಲ್ಲಿನ ದೇವರ ಕೆರೆ ನೀಗಿಸುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯು ವಸತಿ ಪ್ರದೇಶವಿರುವ ಜಾಗದಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದು, ಜಾನುವಾರು ತ್ಯಾಜ್ಯ ತಿಂದಿರುವುದೇ ಸಾವಿಗೆ ಕಾರಣವಾಗಿದೆ ಎಂಬ ಆರೋಪವಿದೆ. ಶಿಕ್ಷಣ ಸಂಸ್ಥೆ ತ್ಯಾಜ್ಯ ಪರಿಸ್ಕರಣೆ ಮಾಡಿ ಹಾಕಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಹಾಕದೆ, ಸಂಸ್ಕರಿಸಿ ತ್ಯಾಜ್ಯ ವಿಲೆವಾರಿ ಮಾಡಬೇಕಿತ್ತು.
ಎಸೆಯಲ್ಪಟ್ಟ ತ್ಯಾಜ್ಯದಲ್ಲಿ ಪ್ಲಾಸ್ಟಿಕ್, ಮಕ್ಕಳ ಶೂಸ್, ಟೂಬ್‌ಲೈಟ್, ಗ್ಲಾಸ್ ಪೀಸ್ ಎಲ್ಲವೂ ಇದ್ದು, ಜಾನುವಾರುಗಳು ಪ್ಲಾಸ್ಟಿಕ್ ತಿನ್ನುವ ಜೊತೆ ಗಾಜು ಕಾಲಿಗೆ ಮಾರಕವಾಗುತ್ತದೆ. ಇದೇ ತ್ಯಾಜ್ಯ ತಿಂದ ನೀರ್ಗದ್ದೆ ನಿವಾಸಿ ಜೋಸೆಫ್ ಮನೆಯ ಹಟ್ಟಿಯಲ್ಲಿದ್ದ ಹಸುಗಳು ಇದಕ್ಕಿದ್ದಂತೆ ಹುಷಾರು ತಪ್ಪಿ ಮೃತಪಟ್ಟಿದ್ದು, ಪಶು ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಹಸುವಿನ ಹೊಟ್ಟೆಯಲ್ಲಿ ಅಗಾಧ ಪ್ರಮಾಣದ ಪ್ಲಾಸ್ಟಿಕ್ ಸಿಕ್ಕಿದೆ. ಇದೀಗಾ ಮತ್ತೆರಡು ಹಸುಗಳ ಅನಾರೋಗ್ಯದಲ್ಲಿದ್ದು ಮೇಕೆ ಕಡಿಯದೆ ಸಾಯುವ ಸ್ಥಿತಿಯಲ್ಲಿದೆ. ಸತ್ತ ಹಸುಗಳಿಗೆ ಪರಿಹಾರ ಸಂಬಂದಪಟ್ಟವರು ಪರಿಹಾರ ನೀಡಬೇಕು. ಅಲ್ಲದೇ ಆ ಜಾಗಕ್ಕೆ ಕಂಪೌಂಡ್ ವಾಲ್ ಕಟ್ಟಿ ಒಣ ಹಾಗೂ ಹಸಿ ಕಸ ವಿಂಗಡಿಸಿ, ಸಮಸ್ಯೆ ಆಗದ ಹಾಗೆ ವಿಲೇ ಮಾಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಹಸು ತಿಂದ ಆಹಾರ ಪಚನಕ್ರಿಯೆ ಹೇಗೆ..
ಹಸುವುನ ಜೀರ್ಣಕ್ರಿಯೆಯೇ ವಿಭಿನ್ನ.. ಮನುಷ್ಯರಿಗೆ ಒಂದು ಹೊಟ್ಟೆಯಿದ್ದರೆ ಹಸು ಹಾಗಲ್ಲ.. ಹಸುವಿನಲ್ಲಿ ನಾಲ್ಕು ಹೊಟ್ಟೆಗಳು ದ್ರಾಕ್ಷಿ ಗೊಂಚಲಿನ ಹಾಗೆ ಇರುತ್ತದೆ. ತಿಂದ ಹುಲ್ಲು ಮೊದಲ ಹೊಟ್ಟೆಗೆ ಹೋಗಿ, ಅಲ್ಲಿಂದ ಮತ್ತೊಂದು ಹೊಟ್ಟೆಗೆ ಹೋಗುತ್ತದೆ. ಅಲ್ಲಷ್ಟು ಜೀರ್ಣಪ್ರಕ್ರಿಯೆ ನಡೆದು, ಮೂರನೇ ಹೊಟ್ಟೆ ಸೇರುತ್ತದೆ. ಮೂರನೇ ಹೊಟ್ಟೆಯಿಂದ ನಾಲ್ಕನೇ ಹುಟ್ಟೆಗೆ ಮೂರು ಹೊಟ್ಟೆಯಲ್ಲಿ ಹಸು ತಿಂದ ಆಹಾರ ಜೀರ್ಣವಾಗಿ ನಾಲ್ಕನೇ ಹುಟ್ಟೆ ಸೇರುತ್ತದೆ. ಮೊದಲ ಹೊಟ್ಟೆಯ ರಚನೆ ಟರ್ಕಿ ಟವಲ್ ತರ ಮುಳ್ಳುಮುಳ್ಳಾಗಿದ್ದು, ಎರಡನೇ ಹೊಟ್ಟೆಯಲ್ಲಿ ಹುಲ್ಲುಕೊಚ್ಚುವ ಬ್ಲೇಡಿನ ಹಾಗೆ ರಚನೆಯಿರುತ್ತದೆ. ಹೀಗೆ ಮೂರು ಹೊಟ್ಟೆಯಲ್ಲಿ ಜೀರ್ಣವಾದ ಆಹಾರ ನಾಲ್ಕನೇ ಹೊಟ್ಟೆಯಲ್ಲಿ ಸ್ಟಾಕ್ ಆಗಿ ನಿಂತು ಬಿಡುತ್ತದೆ. ಹೀಗೆ ನಿಂತ ಆಹಾರದಿಂದ ಹೊಸವಿಗೆ ಹೊಟ್ಟೆ ಉಬ್ಬರಿಸುತ್ತದೆ. ಹಸು ತಿಂದ ಪ್ಲಾಸ್ಟಿಕ್ ನಾಲ್ಕನೇ ಹೊಟ್ಟೆಯಲ್ಲಿ ಸ್ಟಾಕ್ ಆಗುತ್ತಾ ಹೊಗುವುದರಿಂದ ಹಸು ಅನಾರೋಗ್ಯಕ್ಕೆ ಒಳಗಾಗುತ್ತದೆ. ಇದಕ್ಕೆ ಯಾವ ಔಷಧವೂ ಇಲ್ಲಾ.. ಶಸ್ತ್ರ ಚಿಕಿತ್ಸೆ ಮೂಲಕ ಪ್ಲಾಸ್ಟಿಕ್ ಹೊರ ತೆಗೆಯುವುದೇ ಪರಿಹಾರ. ಸೂಕ್ಷ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ನೀಡದ್ದರೆ ಹಸು ಸಾಯುತ್ತದೆ.
– ಶಂಕರ್ ಶೆಟ್ಟಿ, ಸಹಾಯಕ ನಿರ್ದೇಶಕ ಪಶು ಚಿಕಿತ್ಸಾಲಯ, ಬೈಂದೂರು.
ಶಿಕ್ಷಣ ಸಂಸ್ಥೆಗಳು ಪರಿಸರದ ಸಂಗತಿಯಲ್ಲಿ ಮಾದರಿಯಾಗಿರಬೇಕಿದ್ದು, ಪರಿಸರ ಮಾಲೀನ್ಯ ಮಾಡುತ್ತಿರುವುದು ಖೇದಕರ ಸಂಗತಿ. ಹಸು ಕಳೆದ ಕೊಂಡವರಿಗೆ ಶಿಕ್ಷಣ ಸಂಸ್ಥೆ ಪರಿಹಾರ ನೀಡಬೇಕಾಗಿದ್ದು, ಸಂಬಂಧಪಟ್ಟ ಇಲಾಖೆ ಕೂಡಾ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಕಂಪೌಂಡ್ ವಾಲ್ ಕಟ್ಟಿ ಒಣ ಹಾಗೂ ಹಸಿ ಕಸ ವಿಂಗಡಿಸಿ, ಸಮಸ್ಯೆ ಆಗದ ಹಾಗೆ ವಿಲೇ ಮಾಡಬೇಕು.
-ಶ್ರೀಧರ್ ಬಿಜೂರು, ವಿಶ್ವ ಹಿಂದೂ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ
ನಮ್ಮ ಹಟ್ಟಿಯಲ್ಲಿದ್ದ ಎರಡು ಹಸುಗಳು ಇದಕ್ಕಿದ್ದಂತೆ ಹುಷಾರು ತಪ್ಪಿದ್ದು, ಪಶು ಚಿಕಿತ್ಸಕರ ಕರೆತಂದು ಚಿಕಿತ್ಸೆ ನೀಡಲಾಯಿತು. ಆದರೂ ಹಸುಗಳ ಸುಧಾರಿಸದೆ ಇದ್ದು, ಒಂದು ಹಸು ಮೃತಪಟ್ಟಿದ್ದು, ಮತ್ತೊಂದು ಹಸು ಮತ್ತೆರೆಡು ದಿನ ಬಿಟ್ಟು ಸತ್ತು ಹೋಯಿತು. ಪಶು ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಹಸುವಿನ ಹೊಟ್ಟೆಯಲ್ಲಿ ಅಗಾಧ ಪ್ರಮಾಣದ ಪ್ಲಾಸ್ಟಿಕ್ ಸಿಕ್ಕಿದ್ದು, ಹಸು ಸಾಯಲು ಪ್ಲಾಸ್ಟಿಕ್ ತಿಂದಿರುವುದೇ ಕಾರಣ ಎಂದು ತಿಳಿಸಿದ್ದಾರೆ. ಮತ್ತೆರಡು ಹಸುಗಳ ಅನಾರೋಗ್ಯದಲ್ಲಿದ್ದು ಮೇಕೆ ಕಡಿಯದೆ ಸಾಯುವ ಸ್ಥಿತಿಯಲ್ಲಿದೆ. ಖಾಸಗಿ ಶಿಕ್ಷಣ ಸಂಸ್ಥೆ ಮನೆ ಸಮೂಪ ತ್ಯಾಜ್ಯ ತಂದು ಸುರಿಯುತ್ತಿದ್ದು, ಜಾನುವಾರು ತ್ಯಾಜ್ಯ ತಂದಿರುವುದೇ ಸಾವಿಗೆ ಕಾರಣವಾಗಿದೆ. ತಕ್ಷಣ ಸಂಬಂಧ ಪಟ್ಟವರು ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳುವ ಜೊತೆ ಸತ್ತ ಹಸುಗಳಿಗೆ ಪರಿಹಾರ ನೀಡಬೇಕು.
– ಜೋಸೆಫ್, ಕೃಷಿಕ, ನೀರ್‍ಗದ್ದೆ, ಕೊಡ್ಲುಹಿತ್ಲು.
Comments are closed.