ಪ್ರಮುಖ ವರದಿಗಳು

ನೆರೆಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ; ಸಾಕುನಾಯಿಯನ್ನು ಮನೆಯಿಂದ ಹೊರಹಾಕಿದ ಮಾಲೀಕ

Pinterest LinkedIn Tumblr

ತಿರುವನಂತಪುರಂ: ತಾನು ಸಾಕಿದ ನಾಯಿ ನೆರೆಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದೆ ಎಂದು ವ್ಯಕ್ತಿಯೊಬ್ಬ ತನ್ನ ಸಾಕುನಾಯಿಯನ್ನೇ ಮನೆಯಿಂದ ಹೊರಹಾಕಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಇತ್ತೀಚೆಗೆ ಸುಮಾರು 3 ವರ್ಷದ ಬಿಳಿ ಬಣ್ಣದ ಪಮೋರಿಯಂ ನಾಯಿಯೊಂದು ತಿರುವನಂತಪುರಂನ ಚಕ್ಕಾಯ್​ ಎಂಬಲ್ಲಿನ ಮಾರುಕಟ್ಟೆ ಹೊರಗೆ ನಿಂತಿತ್ತು. ಬೀದಿ ಬದಿ ನಿಂತಿದ್ದ ನಾಯಿಯನ್ನು ನೋಡಿದ ಜನರು ಪೀಪಲ್​ ಫಾರ್​ ಅನಿಮಲ್​ ಸಂಸ್ಥೆಯ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದಾರೆ. ಸ್ವಯಂಸೇವಕರು ಬಂದು ನಾಯಿಯನ್ನು ರಕ್ಷಿಸಿ ತಮ್ಮ ಸಂಸ್ಥೆಗೆ ಕರೆದೊಯ್ದುದ್ದರು.

ಅಲ್ಲಿ ನಾಯಿಯನ್ನು ಪರಿಶೀಲಿಸಿದಾಗ ಅದರ ಕತ್ತಿನಲ್ಲಿ ಚೀಟಿಯೊಂದು ಸಿಕ್ಕಿತ್ತು. ಅದರಲ್ಲಿ ನಾಯಿಯ ಮಾಲೀಕ ತನ್ನ ಪ್ರೀತಿಯ ನಾಯಿಯನ್ನು ಮನೆಯಿಂದ ಹೊರಹಾಕಿದ್ದಕ್ಕೆ ಕಾರಣ ತಿಳಿಸಿದ್ದ. ‘ಇದು ಬಹಳ ಶಿಸ್ತಿನಿಂದ ಬೆಳೆದ ನಾಯಿ. ಒಳ್ಳೆಯ ಗುಣಗಳನ್ನು ಹೊಂದಿದೆ. ಹೆಚ್ಚಿನ ಆಹಾರ ತಿನ್ನುವುದಿಲ್ಲ. ಯಾವುದೇ ರೋಗಗಳಿಲ್ಲ. ಇದಕ್ಕೆ ವಾರಕ್ಕೆ ಐದು ಬಾರಿ ಸ್ನಾನ ಮಾಡಿಸುತ್ತಿದ್ದೆವು. ಈ ಮೂರು ವರ್ಷಗಳಲ್ಲಿ ನಾಯಿ ಯಾರನ್ನೂ ಕಚ್ಚಿಲ್ಲ. ಇದು ಹಾಲು, ಬಿಸ್ಕೆಟ್​ ಮತ್ತು ಮೊಟ್ಟೆಯನ್ನು ತಿನ್ನುತ್ತದೆ. ನೆರೆಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಇದನ್ನು ಮನೆಯಿಂದ ಹೊರಹಾಕಿದ್ದೇನೆ’ ಎಂದು ಚೀಟಿಯಲ್ಲಿ ಬರೆದಿತ್ತು.

ಇದನ್ನು ನೋಡಿದ ಸ್ವಯಂ ಸೇವಕರು ಹೌಹಾರಿದ್ದಾರೆ. ನಂತರ ಸ್ವಯಂ ಸೇವಕರೊಬ್ಬರು ಈ ಕುರಿತು ಸಂಸ್ಥೆಯ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದು, ನಾಯಿಯನ್ನು ಮನೆಯಿಂದ ಹೊರಹಾಕಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಅನಿಸುತ್ತದೆ. ಆತನ ಮಕ್ಕಳ ಸ್ಥಿತಿ ಏನಾಗಿದೆ ಎಂದು ನಾನು ಯೋಚಿಸುತ್ತಿದ್ದೇನೆ. ನಾಯಿಗಳಲ್ಲಿ ಅಕ್ರಮ ಸಂಬಂಧ ಎಂಬುದು ಇರುತ್ತದೆಯೇ? ಇದು ಹೌದಾದರೆ, ಅದರ ಮಾಲೀಕ ನಾಯಿಗೆ ಒಳ್ಳೆಯ ಸಂಗಾತಿಯನ್ನು ಹುಡುಕಿ ಮದುವೆ ಮಾಡಿಸಬೇಕಿತ್ತು. ನಾಯಿಗಳು ಬೆದೆಗೆ ಬಂದಾಗ ಸಹಜವಾಗಿ ಸಂಗಾತಿಯನ್ನು ಹುಡುಕುತ್ತವೆ. ಈ ನೈಸರ್ಗಿಕ ನಿಯಮವನ್ನು ಅರಿಯಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

Comments are closed.