ಕರಾವಳಿ

ಕರಾವಳಿಯಲ್ಲಿ ನಿರಂತರ ಮಳೆ : ತುಂಬಿ ಹರಿದ ರಾಜಕಾಲುವೆ – ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ ಸೃಷ್ಟಿ

Pinterest LinkedIn Tumblr

ಮಂಗಳೂರು, ಜುಲೈ.26 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ವರುಣ ಅಬ್ಬರಿಸಿದ ಪರಿಣಾಮ ಮಂಗಳೂರಿನ ಕೆಲವೆಡೆ ಕೃತಕ ನೆರೆ ಪರಿಸ್ಥಿತಿ ಉದ್ಭವವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಬಿರುಸಿನಿಂದ ಆರಂಭಗೊಂಡ ಮಳೆ ಗುರುವಾರ-ಶುಕ್ರವಾರವೂ ಮುಂದುವರಿದಿದ್ದು,ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ನಗರದ ಎಂಪೈರ್ ಮಾಲ್ ಸಮೀಪ, ಜೈಲು ರಸ್ತೆ, ಗುಜರಾತಿ ಶಾಲೆ ಬಳಿ, ಜ್ಯೋತಿ ವೃತ್ತದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲೇ ನೀರು ನಿಂತಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇದಲ್ಲದೆ ಫಳ್ನೀರ್ ರಸ್ತೆ, ಕೊಟ್ಟಾರ ಚೌಕಿ ಜಲಾವೃತಗೊಂಡಿದೆ. ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ಹರಿಯುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆಗೊಳಗಾದರು.

ಕರಾವಳಿಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜೋರಾದ ಗಾಳಿ-ಮಳೆ ಸುರಿಯುತ್ತಿದೆ ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ಪಶ್ಚಿಮ ಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಚುರುಕು ಪಡೆದಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ನೀರಿನ ಮಟ್ಟ ಏರಿಕೆಯಾಗಿದೆ.

Comments are closed.