ಮಂಗಳೂರು, ಜುಲೈ.26: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ .ಮಂಗಳೂರಿನಲ್ಲಿರುವ ಕೇಂದ್ರ ರೈಲು ನಿಲ್ದಾಣದೊಳಗೆ ಮತ್ತೆ ಮಳೆ ನೀರು ನುಗ್ಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಶುಕ್ರವಾರವೂ ಮುಂದುವರಿದಿದ್ದು, ಧಾರಾಕಾರ ಮಳೆಗೆ ಮಂಗಳೂರಿನ ವಿವಿಧೆಡೆ ಜಲಾವೃತಗೊಂಡಿದೆ. ಕಳೆದ ವಾರ ಭಾರೀ ಮಳೆ ಹಿನ್ನೆಲೆಯಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಮಂಗಳೂರಿನ ಕೇಂದ್ರ ರೈಲು ನಿಲ್ದಾಣದೊಳಗೆ ಮತ್ತೆ ಮಳೆ ನೀರು ನುಗ್ಗಿದೆ. ಕೃತಕ ನೆರೆಯಿಂದ ರೈಲು ನಿಲ್ದಾಣದ ಆವರಣ ಕೆರೆಯಂತಾಗಿದೆ. ಟಿಕೆಟ್ ಕೌಂಟರ್ ಹೊರಗಡೆ ನೀರು ನಿಂತಿದ್ದು, ಅದನ್ನು ಹೊರಹಾಕಲು ಸಿಬ್ಬಂದಿಗಳು ಹರಸಾಹಸಪಡುವುದು ಕಂಡು ಬಂತು. ರೈಲು ನಿಲ್ದಾಣದೊಳಗೆ ಕೃತಕ ನೆರೆ ಸೃಷ್ಟಿಯುಂಟಾಗಿರುವುದರಿಂದ ನಿಲ್ದಾಣಕ್ಕೆ ಆಗಮಿಸುವ, ನಿರ್ಗಮಿಸುವ ಪ್ರಯಾಣಿಕರು ಪರದಾಡುವಂತಾಗಿದೆ.
ಮಂಗಳೂರಿನ ವಿವಿಧೆಡೆ ನೀರು ತುಂಬಿ ಜನರ ಓಡಾಟಕ್ಕೆ ಅಡಚಣೆಯಾಗಿದೆ. ಪಾಂಡೇಶ್ವರ ಸಮೀಪದ ಸುಭಾಷ್ ನಗರ ಪ್ರಥಮ ಕ್ರಾಸ್ ಸಂಪೂರ್ಣ ಜಲಾವೃತವಾಗಿದೆ,ಫಳ್ನೀರ್ ರಸ್ತೆ, ಕೊಟ್ಟಾರ ಚೌಕಿ ಜಲಾವೃತಗೊಂಡಿದೆ. ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ಹರಿಯುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿದೆ. ಬಸ್ ಸಹಿತ ಇತರ ವಾಹನಿಗರ ಸುಗಮ ಸಂಚಾರಕ್ಕೆ ಮಳೆ, ಕೊಳಚೆ ನೀರು ಅಡ್ಡಿಯಾಗಿ ಪರಿಣಮಿಸಿದೆ.
ಕರಾವಳಿಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ಪಶ್ಚಿಮ ಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಚುರುಕು ಪಡೆದಿದೆ.
Comments are closed.