ಕರಾವಳಿ

BREAKING NEWS : ರಾಜಿನಾಮೆ ನೀಡಿರುವ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್

Pinterest LinkedIn Tumblr

ಬೆಂಗಳೂರು, ಜುಲೈ. 28: ರಾಜ್ಯ ರಾಜಕಾರಣದಲ್ಲಿ ಮಹತ್ವದ ತಿರುವಿಗೆ ಕಾರಣವಾದ ಅತೃಪ್ತ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರ ರಾಜಿನಾಮೆ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದಿದ್ದು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಅತೃಪ್ತ ಜೆಡಿಎಸ್‌ ಹಾಗೂ ಕಾಂಗ್ರೆಸ್‌‌ನ 14 ಶಾಸಕರನ್ನು ಅನರ್ಹಗೊಳಿಸಲಾಗಿದೆ.

ರಾಜೀನಾಮೆ ವಿಚಾರವಾಗಿ ವಿಧಾನ ಸಭಾ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪತ್ರಿಕಾಗೋಷ್ಟಿ ನಡೆಸಿ, ರಾಜೀನಾಮೆ ನೀಡಿದ ಎಲ್ಲಾ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕಾನೂನು ನಿಯಮಾವಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ ಪ್ರತಾಪ್ ಗೌಡ ಪಾಟೀಲ್(ಮಸ್ಕಿ), ಬಿಸಿ ಪಾಟೀಲ್(ಹಿರೇಕೆರೂರು), ಶಿವರಾಮ ಹೆಬ್ಬಾರ್(ಯಲ್ಲಾಪುರ), ಎಸ್‌ಟಿ ಸೋಮಶೇಖರ್(ಯಶವಂತಪುರ), ಬೈರತಿ ಬಸವರಾಜು(ಕೆಆರ್ ಪುರ), ಆನಂದ್ ಸಿಂಗ್(ವಿಜಯನಗರ), ಆರ್. ರೋಷನ್ ಬೇಗ್(ಶಿವಾಜಿನಗರ), ಮುನಿರತ್ನ(ರಾಜರಾಜೇಶ್ವರ ನಗರ), ಶ್ರೀಮಂತ ಪಾಟೀಲ್(ಕಾಗವಾಡ), ಎಂಟಿಬಿ ನಾಗರಾಜ್(ಹೊಸಕೋಟೆ), ಡಾ.ಸುಧಾಕರ್(ಚಿಕ್ಕಬಳ್ಳಾಪುರ),ಜೆಡಿಎಸ್‌ನ ನಾರಾಯಣ ಗೌಡ(ಕೆಆರ್ ಪೇಟೆ), ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್)ಹಾಗೂ ಎಚ್.ವಿಶ್ವನಾಥ್ (ಹುಣಸೂರು) ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಶಾಸಕರ ಭವನದಲ್ಲಿ ರವಿವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್ ರಮೇಶ್ ಕುಮಾರ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದರು.

ತಮ್ಮ ಪಕ್ಷದ ಶಾಸಕರನ್ನು ಅನರ್ಹಗೊಳಿಸುವಂತೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಹಾಗೂ ಕುಮಾರಸ್ವಾಮಿ ದೂರು ನೀಡಿದ್ದರು ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರಕಾರದ ವಿರುದ್ದ ಬಂಡಾಯ ಎದ್ದು ಮುಂಬೈಗೆ ಹಾರಿದ್ದ ಒಟ್ಟು 17 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದಂತಾಗಿದೆ. ಸ್ಪೀಕರ್ ಗುರುವಾರದಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್.ಶಂಕರ್ ಅವರನ್ನು ಅನರ್ಹಗೊಳಿಸಿದ್ದರು.

ಜುಲೈ 23ರಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವಲ್ಲಿ ವಿಫಲವಾಗಿದ್ದರಿಂದ ರಾಜೀನಾಮೆ ನೀಡಿದ್ದರು. ಅಂತೆಯೇ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಜುಲೈ 26ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಸಂಪರ್ಕಿಸಿ, 31ರಂದು ಸರ್ಕಾರದ ಧನವಿನಿಯೋಗ ಮಸೂದೆ ಅಂತ್ಯಗೊಳ್ಳಲಿದೆ. ಹಾಗಾಗಿ ಧನಿವಿನಿಯೋಗ ಮಸೂದೆ ಮತ್ತು ಇತರ ಬೇಡಿಕೆಗಳ ಮೇಲೆ ಮತಯಾಚನೆ ಆಗಬೇಕಿದೆ. ನಾನೂ ಸಭೆಯ ವಿಶ್ವಾಸಮತ ಪಡೆಯಬೇಕಿದೆ. ಆದ ಕಾರಣ ಸೋಮವಾರ ಅಧಿವೇಶನ ಕರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಸೋಮವಾರ ಅಧಿವೇಶನ ನಡೆಸಲು ಸಿದ್ಧ ನಡೆಸುವಂತೆ ಕಚೇರಿಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದೇನೆ. ಬಹುಮತ ಸಾಬೀತಿಗೆ ಸೋಮವಾರ ಕರೆದ ಹಿನ್ನೆಲೆಯಲ್ಲಿ ಉಳಿದ ಎಲ್ಲ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ. ಹಾಗಾಗಿ ನಮ್ಮ ಕಚೇರಿಯ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ಕೂಡ ಕೆಲಸ ಮಾಡಿದ್ದಾರೆ. ಸೋಮವಾರ ಸದನದಲ್ಲಿ ನಾವು ತೊಡಗಿಕೊಳ್ಳುವದರಿಂದ ಇಂದೇ ಎಲ್ಲ ಅತೃಪ್ತ ರಾಜೀನಾಮೆ ಅರ್ಜಿಗಳ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ. ಖಿನ್ನನಾಗಿದ್ದಾನೆ. ನನ್ನ ವೈಯಕ್ತಿಕ ಜೀವನದಲ್ಲಿ ತುಳಸಿದಾಸಪ್ಪ, ಅಬ್ದುಲ್ ನಜೀರ್ ಸಾಬ್, ಬಿ.ಎ.ಮೊಯಿದ್ದೀನ್, ಎ.ಕೆ.ಸುಬ್ಬಯ್ಯ ಅವರಂಥವರಿಂದ ನಾನು ಪ್ರಭಾವಿತನಾಗಿದ್ದೇನೆ. ನನ್ನನ್ನು ರೂಪಿಸಿದವರು ಅವರು ಎಂದು ಹೇಳಿದರು.

ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮೇರೆಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಕರೆಯಲಾಗಿದೆ. ವಿಶ್ವಾಸಮತ ಯಾಚನೆ, ಧನಿವಿನಿಯೋಗ ಮಸೂದೆ ಮೇಲೆ ಚರ್ಚೆ, ಪರಿಶೀಲನೆ ಮತ್ತು ಮತಕ್ಕೆ ಹಾಕುವ ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿ ನಮ್ಮ ಕಾರ್ಯದರ್ಶಿಯ ಮೂಲಕ ಎಲ್ಲಾ ಸದಸ್ಯರಿಗೆ ಸೂಚನ ಪತ್ರವನ್ನು ಕಳುಹಿಸಿಕೊಟ್ಟಿದ್ದೇನೆ. ಇದಕ್ಕಾಗಿ ನಮ್ಮ ಕಾರ್ಯಾಲಯ ಶನಿವಾರ, ಭಾನುವಾರ ಎರಡೂ ದಿನ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Comments are closed.