ಕರಾವಳಿ

ಮಂದಾರ ರಾಮಾಯಣ ತುಳು ಸಂಸ್ಕೃತಿಯ ಪ್ರತೀಕ : ಡಾ. ಶ್ರೀ ಸದ್ಗುರು ಶಶಿಕಾಂತ ಮಣಿ ಸ್ವಾಮೀಜಿ 

Pinterest LinkedIn Tumblr

ಮಂಗಳೂರು: ‘ಮಂದಾರ ರಾಮಾಯಣವು ಕೇವಲ ಪೌರಾಣಿಕ ಮತ್ತು ಧಾರ್ಮಿಕ ಚೌಕಟ್ಟನ್ನು ಮಾತ್ರ ಉಲ್ಲೇಖಿಸದೆ ಅದು ಸಮಸ್ತ ತುಳುನಾಡಿನ ಜನ ಜೀವನ ಪದ್ಧತಿಯ ಆಗುಹೋಗುಗಳನ್ನು, ತೌಳವ ಜನಪದದ ಭೌಗೋಳಿಕ ವರ್ಣನೆಯನ್ನು, ಅಲ್ಲದೆ ತುಳು ಭಾಷಾ ಪ್ರೌಢಿಮೆಯನ್ನು ಮೆರೆದಿದೆ. ಮೂಲ ವಾಲ್ಮೀಕಿ ರಾಮಾಯಣವು ಸಮಸ್ತ ಭಾರತಕ್ಕೆ ಧರ್ಮಗ್ರಂಥವಾದರೆ, ಮಂದಾರ ರಾಮಾಯಣ ತುಳುವರ ಧರ್ಮಗ್ರಂಥ ವಾಗಿದೆ’ ಎಂದು ಡಾ. ಶ್ರೀ ಸದ್ಗುರು ಶಶಿಕಾಂತ ಮಣಿ ಸ್ವಾಮೀಜಿಯವರು ಹೇಳಿದರು.

ತುಳುವರ್ಲ್ಡ್ (ರಿ.) ಕುಡ್ಲ ಮತ್ತು ತುಳುವೆರೆ ಕೂಟ (ರಿ.) ಶಕ್ತಿನಗರ ಇವರ ಜಂಟಿ ಆಶ್ರಯದಲ್ಲಿ ತುಳುವೆರೆ ಚಾವಡಿ ಶಕ್ತಿನಗರದಲ್ಲಿ ನಡೆಯುತ್ತಿದ್ದ ‘ಏಳದೆ ಮಂದಾರ ರಾಮಾಯಣ: ಸುಗಿಪು-ದುನಿಪು’ ಪ್ರವಚನ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ದೀಪಬೆಳಗಿಸಿ ಅವರು ಮಾತನಾಡಿದರು.

ಭಾಷಾ ಶ್ರೀಮಂತಿಕೆ :

‘ಮಂದಾರರ ಮಾತೃಭಾಷೆ ಕರಾಡವಾದರೂ ತುಳುವಿನಲ್ಲಿ ಈ ಗ್ರಂಥ ಬರೆಯಲು ಅವರಿಗೆ ಇಲ್ಲಿಯ ಪ್ರತಿಯೊಬ್ಬರ ಒಡನಾಟ ಕಾರಣವಾಗಿದೆ. ತುಳುಭಾಷೆಯ ಸಂಸ್ಕೃತಿಯ ಆಳವಾದ ಜ್ಞಾನ ಪಡೆಯದಿದ್ದರೆ ಈ ಗ್ರಂಥದ ರಚನೆ ಅಸಾಧ್ಯವಾಗಿತ್ತು. ತುಳು ಭಾಷೆ ಎಷ್ಟು ಶ್ರೀಮಂತವಾಗಿದೆ ಎಂದು ಮಂದಾರ ರಾಮಾಯಣ ಓದಿ ತಿಳಿಯಬಹುದು’ ಎಂದು ಹಿರಿಯ ಲೇಖಕಿ,ವಿಶ್ರಾಂತ ಪ್ರಾಚಾರ್ಯೆ ಪ್ರೊ.ಚಂದ್ರಕಲಾ ನಂದಾವರ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ನ್ಯಾಯವಾದಿ, ಕೇರಳ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಬಿ. ಸುಬ್ಬಯ್ಯ ರೈ ಅವರು ಮಾತನಾಡಿ ‘ಅಕಾಡೆಮಿಗಳು ಮಾಡಬೇಕಾಗಿರುವ ಈ ಕಾರ್ಯಕ್ರಮವನ್ನು ತುಳುವರ್ಲ್ಡ್ ಮತ್ತು ತುಳುವೆರೆ ಕೂಟ ದಂತಹ ಸಂಸ್ಥೆಗಳು ಮಾಡಿದ್ದು ಶ್ಲಾಘನೀಯ. ಆಟಿಯ ಕೂಟದಂತಹ ವೈಭವೀಕೃತ ಕಾರ್ಯಗಳು ಎಲ್ಲೆಡೆ ಆಗುತ್ತಿರುವಾಗ ತುಳು ಕಾವ್ಯಗಳನ್ನು ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಾಗಿದೆ’ಎಂದರು.

ಮಂದಾರ ಸಮ್ಮಾನ್:

ಕಾರ್ಯಕ್ರಮದಲ್ಲಿ ಮಂದಾರ ಕೇಶವ ಭಟ್ ಅವರ ಮಕ್ಕಳಾದ ಕೆ.ಶಾಂತ, ಶಾಂಭವಿ ಭಟ್, ಶಂಕರಿ ಎಂ.ಭಟ್ ಮತ್ತು ಎಂ.ಶಾರದಾಮಣಿ ಅವರಿಗೆ ಕಾವ್ಯಗೌರವ ನೀಡಿ ಸಮ್ಮಾನಿಸಲಾಯಿತು. ಅಲ್ಲದೆ ಕಳೆದ ಮೂರು ದಶಕಗಳಿಂದ ಮಂದಾರ ರಾಮಾಯಣಕ್ಕೆ ಸೇವೆಸಲ್ಲಿಸಿದ ಆರಂಭಿಕ ವಾಚನ-ಪ್ರವಚನಕಾರರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಚಂದ್ರಕಲಾ ನಂದಾವರ ಮತ್ತು ತೋನ್ಸೆ ಪುಷ್ಕಳ ಕುಮಾರ್,ಅವರನ್ನು ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹಿರಿಯ ಜಾನಪದ ವಿದ್ವಾಂಸ ಡಾ. ವಾಮನ ನಂದಾವರ, ಪತ್ರಕರ್ತ ಪರಮಾನಂದ ಸಾಲ್ಯಾನ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಪೂವರಿ ಪತ್ರಿಕೆಯ ವಿಜಯಕುಮಾರ್ ಹೆಬ್ಬಾರಬೈಲ್, ಶಮೀನ ಆಳ್ವಾ, ಸೇಸಮ್ಮ ಟೀಚರ್, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಶಾಂತ ಕುಂಟಿನಿ, ಭಾರತಿ ಜಿ ಆಮೀನ್, ಸುಧಾಕರ ಜೋಗಿ, ಎನ್ . ವಿಶ್ವನಾಥ್, ಮಾಸ್ಟರ್ ತಕ್ಷಿಲ್ ದೇವಾಡಿಗ, ಸಾನ್ವಿತ್ ಕುಲಾಲ್, ಅಶೋಕ್ ಮಾಡ ಕುದ್ರಾಡಿಗುತ್ತು ಮೊದಲಾದವರು ಉಪಸ್ಥಿತರಿದ್ದರು.

ತುಳು ವರ್ಲ್ಡ್ ಕುಡ್ಲ ಇದರ ಶ್ರುತಿ ಹರ್ಷ ಕಾರ್ಯಕ್ರಮ ನಿರೂಪಿಸಿದರು. ಹರ್ಷ ರೈ ಪುತ್ರಕಳ ಸ್ವಾಗತಿಸಿ, ಅಧ್ಯಕ್ಷ ಡಾ. ರಾಜೇಶ್ ಆಳ್ವ ಅವರು ವಂದಿಸಿದರು.

ಸಪ್ತಾಹ ಮಂಗಳಾಚರಣೆ: ಮೋಕೆದ ಕಡಲ್:

ಕೊನೆಯಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಂದಾರ ರಾಮಾಯಣದ ಏಳನೆಯ ಸರ್ಗ ‘ಮೋಕೆದ ಕಡಲ್’ ಇದರ ಪ್ರವಚನವನ್ನು ನಡೆಸಿ ಸಪ್ತಾಹಕ್ಕೆ ಮಂಗಳಾಚರಣೆಗೈದರು. ತೋನ್ಸೆ ಪುಷ್ಕಳ ಕುಮಾರ್ ಮತ್ತು ಸಂಗೀತ ಬಾಲಚಂದ್ರ ಕಾವ್ಯ ವಾಚನ ಮಾಡಿದರು. ಬಳಿಕ ಎಲ್ಲರೂ ರಾಮರಕ್ಷಾ ಸ್ತೋತ್ರ ಪಠಿಸಿ ಮುಕ್ತಾಯ ಹಾಡಲಾಯಿತು.

Comments are closed.