ಮಂಗಳೂರು, ಆಗಸ್ಟ್.06 ; ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮಳೆ ಬಿರುಸಾಗಿದೆ. .ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಇಂದು ಮಧ್ಯಾಹ್ನ 12 : 40ರ ಸುಮಾರಿಗೆ ಸುರಿದ ಭಾರೀ ಗಾಳಿ ಮಳೆಗೆ ನಗರದ ಉರ್ವ ವೆಲ್ಸ್‌ಪೇಟೆಯಲ್ಲಿ ಗೌರಿ ಎಂಬವರ ಮನೆಯ ಮೇಲೆ ಮರದ ಬೃಹತ್ ರೆಂಬೆಯೊಂದು ಮುರಿದ್ದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.
ಮಳೆಯ ಜೊತೆ ಜೋರದ ಗಾಳಿ ಬೀಸಿದ್ದರಿಂದ ಮನೆಯ ಪಕ್ಕದಲ್ಲಿದ್ದ ಹಲಸಿನ ಹಣ್ಣಿನ ಮರದ ಮಧ್ಯದ ಬೃಹತ್ ರೆಂಬೆ ಮುರಿದು ಮನೆಯ ಮುಂಭಾಗದ ಚಾವಾಡಿ ಹಾಗೂ ಪಕ್ಕದಲ್ಲಿದ್ದ ಅಡುಗೆ ಕೋಣೆಯ ಮೇಲಿನ ಭಾಗಕ್ಕೆ ಬಿದ್ದಿದೆ. ರೆಂಬೆ ಬಿದ್ದ ರಭಸಕ್ಕೆ ಛಾವಣಿಯ ಮೇಲ್ಭಾಗ ಸಂಪೂರ್ಣ ಕುಸಿದು ಕೊಣೆಯೊಳಗೆ ಬಿದ್ದಿದೆ. ಅಡುಗೆ ಕೋಣೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಅದೃಷ್ಟವಶಾತ್ ಈ ಘಟನೆ ನಡೆಯುವ ಸಂದರ್ಭ ಮನೆಯ ಸದಸ್ಯರು ಮತ್ತೊಂದು ಕೋಣೆಯಲ್ಲಿದ್ದದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಮನೆಯ ಛಾವಣಿ ಕುಸಿದು ಬಿದ್ದು ಮನೆಗೆ ಸಂಪೂರ್ಣ ಹಾನಿಯುಂಟಾಗಿದೆ.ಮಾತ್ರವಲ್ಲದೇ ಬಡ ಕುಟುಂಬಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕರಾವಳಿಯಲ್ಲಿ ಭಾರೀ ಮಳೆ : ಜತೆಗೆ ಗಾಳಿಯ ಅಬ್ಬರ
ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದ್ದು, ನಾಗರೀಕರಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ..
ಜಿಲ್ಲೆಯಲ್ಲಿ ಮಳೆ ಜತೆಗೆ ಗಾಳಿಯ ಅಬ್ಬರವೂ ಜೋರಾಗಿದ್ದು, ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ದಡ್ಡಲ್ ಕಾಡ್ ಸಮೀಪದ ಕೋಟೆಕಣಿ ಹಾಗೂ ನಗರದ ಪಿವಿಎಸ್ ಸಮೀಪದ ಜೈಲ್ ರೋಡ್ ಬಳಿ ಕಂಪೌಂಡ್ ಕುಸಿದು ಬಿದ್ದಿದೆ.
ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೆರೆ ಪೀಡಿತ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು. ನೆರೆ ಹಾವಳಿ ಆಗುವ ಸಂದರ್ಭದಲ್ಲಿ ಅಧಿಕಾರಿಗಳ ಸೂಚನೆ ಪಾಲಿಸಿ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Comments are closed.