ಕರಾವಳಿ

ಭಾರೀ ಮಳೆಗೆ ಗುಡ್ಡ ಕುಸಿತ : ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ – ಪರದಾಡಿದ ವಾಹನ ಸವಾರರು

Pinterest LinkedIn Tumblr

ಮಂಗಳೂರು / ಬೆಳ್ತಂಗಡಿ, ಆಗಸ್ಟ್.07: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಹಲವೆಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಭಾರೀ ಮಳೆ ಮುಂದುವರಿದಿದ್ದು, ಈ ಭಾಗಗಳಲ್ಲಿ ನಿರಂತರ ಭಾರೀ ಭೂ ಕುಸಿತ ಉಂತಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಹಾಗೂ ಮಂಗಳೂರು ‌ನಡುವೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

ಮಂಗಳವಾರವೂ ಚಾರ್ಮಾಡಿ ಘಾಟಿ ರಸ್ತೆಯ 3ನೇ, 4ನೇ ಹಾಗೂ 7ನೇ ತಿರುವಿನ ಅಲ್ಲಲ್ಲಿ ಗುಡ್ಡ ಕುಸಿದಿದ್ದು ಸಂಚಾರಕ್ಕೆ ತೊಡಕಾಗಿತ್ತು. ಮಾತ್ರವಲ್ಲದೆ ಬೃಹತ್ ಮರವೂ ಬಿದ್ದಿದ್ದು ಇವುಗಳನ್ನು ತೆರವುಗೊಳಿಸಿ ಬಳಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮಳೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವವರೆಗೆ ಚಾರ್ಮಾಡಿ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಪ್ರಕಟಿಸಿದೆ. ಸಂಚಾರ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಘಾಟಿ ರಸ್ತೆಯಲ್ಲಿ ಕಿ.ಮೀ. ಗಟಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ.

ತಡ ರಾತ್ರಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಚಾರ್ಮಾಡಿ ಘಾಟಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪೋಲೀಸರು, ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಘಾಟಿಯಲ್ಲಿ ಸಿಲುಕಿದ್ದವರನ್ನು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು.

ರಸ್ತೆಗೆ ಕುಸಿದು ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸದ್ಯ ಘಾಟಿಯಲ್ಲಿ ಸಿಲುಕಿಕೊಂಡಿದ್ದ ಎಲ್ಲ ವಾಹನಗಳನ್ನೂ ಅಲ್ಲಿಂದ ತೆರವುಗೊಳಿಸಲಾಗಿದೆ. ಆದರೆ ಚಾರ್ಮಾಡಿ ಹಸನಬ್ಬ ಅವರ ಕಾರು ಮಾತ್ರ ‌ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ತೆರವು ಕಾರ್ಯಾಚರಣೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಕರಾವಳಿ ಕಡೆಗೆ ಸಂಚರಿಸುವ ವಾಹನಗಳನ್ನು ಕೊಟ್ಟಿಗೆಹಾರದಲ್ಲಿ ತಡೆಯಲಾಗಿದ್ದು ಬದಲಿ ಮಾರ್ಗದಲ್ಲಿ ವಾಹನ ಸಂಚರಿಸುತ್ತಿದೆ.

Comments are closed.