ಕರಾವಳಿ

ಮಣ್ಣು ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿ : ಇಂದು ಕೂಡ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

Pinterest LinkedIn Tumblr

ಮಂಗಳೂರು ಆಗಷ್ಟ್ 09 : ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ 86.20 ರವರೆಗಿನ ಚಾರ್ಮಾಡಿ ಘಾಟ್ ಭಾಗದಲ್ಲಿ ಆಗಸ್ಟ್ 5 ರಿಂದ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಆಗಸ್ಟ್ 6 ರಂದು ಬಿರುಗಾಳಿ ಸಹಿತ ಸುರಿದ ಭಾರೀ ಪ್ರಮಾಣದ ಮಳೆಗೆ ರಸ್ತೆಗೆ ಬಾಗಿರುವ ದೊಡ್ಡ ಗಾತ್ರದ ಮರಗಳೊಂದಿಗೆ ಗುಡ್ಡಕುಸಿತ ಉಂಟಾಗಿರುತ್ತದೆ.

ಚಾರ್ಮಾಡಿ ಘಾಟ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಗುಡ್ಡಕುಸಿತದ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಆ.9ರಂದು ಮಧ್ಯರಾತ್ರಿ 12ರವರೆಗೆ ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿಷೇಧಿಸಿ ಆದೇಶಿಸಿದ್ದಾರೆ.

ಚಾರ್ಮಾಡಿ ಘಾಟ್ ಭಾಗದಲ್ಲಿ ಇನ್ನೂ ಮಳೆ ಹೆಚ್ಚಾಗಿ ಬೀಳುತ್ತಿರುವ್ಯದರಿಂದ ಹಾಗೂ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವ್ಯದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ಆಗಸ್ಟ್ 7 ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 9ರಂದು ಮಧ್ಯರಾತ್ರಿ 12 ಗಂಟೆವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಿದ್ದಾರೆ.

ಚಾರ್ಮಾಡಿ ಘಾಟ್ ಭಾಗದಲ್ಲಿ ಸೋಮವಾರದಿಂದ ಆರಂಭವಾಗಿರುವ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದೆ. ಚಾರ್ಮಾಡಿಯ ಹಲವೆಡೆ ಗುಡ್ಡ ಕುಸಿತ ಜಾಗದಲ್ಲಿ ಪದೇಪದೇ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ಕಷ್ಟ ಸಾಧ್ಯವಾಗಿದ್ದು, ವಾಹನ ಸಂಚಾರ ನಿಷೇಧವನ್ನು ಮತ್ತೊಂದು ದಿನ ಮುಂದೂಡಿಕೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ವಾಹನ ಸಂಚಾರವನ್ನು ನಿರ್ಬಂಧಿಸಿರುವ ಮಾರ್ಗ ಹಾಗೂ ಬದಲಿ ಮಾರ್ಗಗಳು ಇಂತಿವೆ: ರಾಷ್ಟ್ರೀಯ ಹೆದ್ದಾರಿ -73(ಹಳೆ ರಾ.ಹೆ.234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ 86.20 ರವರೆಗಿನ ಚಾರ್ಮಾಡಿ ಘಾಟ್ ಭಾಗದ ವಾಹನ ಸಂಚಾರವನ್ನು ನಿಷೇಧಿಸಿದ್ದು, ಉಜಿರೆ- ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ (ರಾ.ಹೆ-75) ಮುಖಾಂತರ ಸಂಚರಿಸಬಹುದಾಗಿದೆ.

ಮೂಡಿಗೆರೆ ಹ್ಯಾಂಡ್ ಪೋಸ್ಟ್ – ಜನ್ನಾಪುರ –ಆನೆಮಹಲ್-ಶಿರಾಡಿ –ಗುಂಡ್ಯ (ರಾಹೆ 75) ಮುಖಾಂತರ ಸಂಚರಿಸಲು ಬದಲಿ ರಸ್ತೆ ವ್ಯವಸ್ಥೆ ಮಾಡಿ ಅವಕಾಶ ಕಲ್ಪಿಸಲಾಗಿರುತ್ತದೆ.

Comments are closed.