ಕರಾವಳಿ

ಮಾತಾ ಅಮೃತಾನಂದಮಯಿ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

Pinterest LinkedIn Tumblr

ಮಂಗಳೂರು: ನಗರದ ಬೋಳೂರು ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಅಮೃತ ವಿದ್ಯಾಲಯದ ಆವರಣದಲ್ಲಿ ಆಗಸ್ಟ್ 23 ರಂದು ಸಂಜೆ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಾಂಸ್ಕೃತಿಕ, ಭಕ್ತಿ ಭಾವದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಸಂಜೆ 3 ರಿಂದ 5.30 ರ ತನಕ ನಡೆದ ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ಮೊಸರು ಕುಡಿಕೆ ಹಾಗೂ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು, ಅಮ್ಮನವರ ಭಕ್ತರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅಮ್ಮನವರ ಜನ್ಮ ನಕ್ಷತ್ರ ಕೃತ್ತಿಕಾ ಪ್ರಯುಕ್ತ ಬ್ರಹ್ಮಸ್ಥಾನದಲ್ಲಿ ವಿಶೇಷ ಜ್ಯೋತಿ ಪೂಜೆ ಹಮ್ಮಿಕೊಳ್ಳಲಾಯಿತು.ಸಂಜೆ 6 ರಿಂದ ಭಾಗವತ ಪಾರಾಯಣ-ದಶಮ ಸ್ಕಂದ,ಶ್ರೀ ಕೃಷ್ಣ ಜನ್ಮ ವೃತ್ತಾಂತ, ದೀಪಾರಾಧನೆ ಜರುಗಿತು.

ನಂತರ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವಿವಿಧ ವಿಭಾಗಗಳ ವತಿಯಿಂದ ನಡೆದ ಸಾಂಸ್ಕೃತಿಕ ಮನೋರಂಜನಾ ಕಲಾ ಸ್ಪರ್ಧೆಯು ಮನ ಮೋಹಕ ಕಾರ್ಯಕ್ರಮಗಳೊಂದಿಗೆ ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ಸುಬ್ರಾಯ ಭಟ್ ಎನ್, ಪ್ರೊಫೆಸರ್ ರಾಣಿ ರಾಮಚಂದ್ರನ್ ಹಾಗೂ ನಟ ಸುರೇಶ್ ವರ್ಕಾಡಿ ತೀರ್ಪುಗಾರರಾಗಿದ್ದರು.

ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ಸಾಮರ್ಥ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಪೂಜೆಯು ಮಧ್ಯರಾತ್ರಿಯ ತನಕ ಬಾಲಗೋಪಾಲ ಪೂಜೆ,ಭಜನೆ,ಆರತಿ ,ಪ್ರಸಾದ ವಿತರಣೆ ಗಳೊಂದಿಗೆ ಜರುಗಿತು.

ಈ ಸಂದರ್ಭದಲ್ಲಿ ಸೇವಾಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್‌ ಪೆರ್ಲ,ಗೌರವಾಧ್ಯಕ್ಷ ಡಾ .ಜೀವರಾಜ್ ಸೊರಕೆ ,ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನವರ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Comments are closed.