ಕರಾವಳಿ

ಡಿ.ಸಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ : ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು.ಬಿ.ರೂಪೇಶ್ ನೇಮಕ

Pinterest LinkedIn Tumblr

ಮಂಗಳೂರು,ಸೆಪ್ಟಂಬರ್ 07 : ದ.ಕ.ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರಾದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕೆಲವೊಂದು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು.ಬಿ.ರೂಪೇಶ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಅದೇಶ ಹೊರಡಿಸಿದೆ.

2011ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅವರು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಅವರನ್ನು ದ.ಕ. ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೈಸೂರಿನ ಎನ್‌ಐಇಯಿಂದ ಬಿ.ಇ. (ಇ ಆಯಂಡ್ ಸಿ) ಪದವೀಧರೆ ಸಿಂಧು ಬಿ.ರೂಪೇಶ್ 2011ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು.

ದಕ್ಷ ಅಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ ಸಾರ್ವಜನಿಕ ವಲಯದಲ್ಲಿ ತಲ್ಲಣ :

ಇನ್ನು ಜಿಲ್ಲೆಯಲ್ಲಿ ಕಳೆದ ವರ್ಷದ ಭೀಕರ ಮಳೆ, ಈ ವರ್ಷದ ಪ್ರವಾಹ, ಅತಿವೃಷ್ಠಿ, ಡೆಂಗ್ಯು, ಮರಳು ಮತ್ತಿತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಶುಕ್ರವಾರ ಐಎಎಸ್ ಸೇವೆಗೆ ಹಠಾತ್ ರಾಜೀನಾಮೆ ಸಲ್ಲಿಸಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆಘಾತಕ್ಕೆ ಕಾರಣವಾಗಿದೆ. ಶಾಂತ ಸ್ವಭಾವದ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ಆಗಿ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯ ವಲಯದಲ್ಲೂ ತಲ್ಲಣ ಮೂಡಿಸಿದೆ.

ತಮ್ಮ ರಾಜೀನಾಮೆ ವೈಯಕ್ತಿಕ ಕಾರಣ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಆದರೆ ಇದೇ ವೇಳೆ ರಾಜಕೀಯ ಒತ್ತಡದಿಂದ ಅವರು ರಾಜಿನಾಮೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ವೈಯಕ್ತಿಕ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿರುವ ಸಸಿಕಾಂತ್ ಸೆಂಥಿಲ್, ತನ್ನ ರಾಜೀನಾಮೆಗೆ ಯಾವುದೇ ವ್ಯಕ್ತಿ ಅಥವಾ ಸದ್ಯ ತಾನು ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲಾಧಿಕಾರಿ ಅವಧಿಯಲ್ಲಿನ ಯಾವುದೇ ಘಟನೆ ಕಾರಣವಲ್ಲ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲವು ಒತ್ತಡಗಳಿಂದ ರಾಜಿಯಾಗಿ ಕೆಲಸ ಮಾಡಬೇಕಾದ ಇಂಥಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ನಾನು ಮುಂದುವರಿಯುವುದು ಸಮಂಜಸವಲ್ಲ ಎಂದು ಅನಿಸಿದ್ದರಿಂದ ನಾನು ರಾಜೀನಾಮೆ ನೀಡುತ್ತಿರುವೆ ಎಂದು ಸಸಿಕಾಂತ್ ಸೆಂಥಿಲ್ ಬರೆದುಕೊಂಡಿದ್ದಾರೆ.

ಅವರು ಬರೆದಿರುವ ಪತ್ರದಲ್ಲಿ ಏನಿದೆ…

‘ಪ್ರಿಯ ಸ್ನೇಹಿತರೆ,

ನಾನು ಇಂದು ನನ್ನ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಸದ್ಯದ ಮಂಗಳೂರು ಡಿಸಿ ಹುದ್ದೆಗೂ ರಾಜೀನಾಮೆಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಅಧಿಕಾರಿಗಳಲ್ಲಿ ನಾನು ಕ್ಷಮೆ ಕೋರಲು ಇಚ್ಚಿಸುತ್ತೇನೆ. ಅವರ ಜತೆ ಕೆಲಸ ಮಾಡಿದ್ದು ಅವಿಸ್ಮರಣೀಯ. ಅರ್ಧದಲ್ಲಿ ರಾಜೀನಾಮೆ ನೀಡಿ ಹೋಗುತ್ತಿರುವುದ್ಕೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ.

ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಮುಂದುವರಿ ಯುವುದು ನನಗೆ ಸಮಂಜಸವೆನಿಸುವುದಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ನೈತಿಕವಾಗಿ ನನಗೆ ಈ ಪದವಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಮಯ ಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ. ನಾನು ಎಎಎಸ್ ವೃತ್ತಿಯ ಆಚೆಗಿದ್ದರೆ, ದೇಶದ ಅಭಿವೃದ್ಧಿಗಾಗಿ, ಜನರಿಗಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು. ಎಲ್ಲಾ ಅದರ ಪಾಡಿಗೆ ಆಗಲಿ ಎಂದು ಸುಮ್ಮನಾಗಲು ಇನ್ನು ಸಾಧ್ಯವಿಲ್ಲ. ಮತ್ತೊಮ್ಮೆ ನನ್ನೊಂದಿಗೆ ಕೆಲಸ ನಿರ್ವಹಿಸಿದ ಎಲ್ಲರಿಗೂ, ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಹದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಸಂತಸದಿಂದಿರಲಿ ಎಂದು ಬಯಸುತ್ತೇನೆ”

ಎಸ್. ಸಸಿಕಾಂತ್ ಸೆಂಥಿಲ್.

Comments are closed.