ಕರಾವಳಿ

ನಗರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ “ಗಿರಿಗಿಟ್‌” ತುಳು ಚಿತ್ರ ಪ್ರದರ್ಶನಕ್ಕೆ ಕೋರ್ಟ್ ತಡೆಯಾಜ್ಞೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.12: ಆಗಸ್ಟ್ ರಂದು ಬಿಡುಗಡೆಗೊಂಡು ನಗರದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತಿರುವ ಗಿರಿಗಿಟ್‌ ತುಳು ಚಿತ್ರ ಪ್ರದರ್ಶನ ಮಾಡದಂತೆ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯ ಗುರುವಾರ ತಡೆಯಾಜ್ಞೆ ವಿಧಿಸಿದೆ.

ಚಲನಚಿತ್ರದಲ್ಲಿ ನ್ಯಾಯವಾದಿಗಳನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿದ್ದು, ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ಹರೀಶ್ ಗಿರಿಗಿಟ್ ಚಲನಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ವಿಧಿಸಿ ಆದೇಶಿಸಿದ್ದಾರೆ.

ರೂಪೇಶ್‌ ಶೆಟ್ಟಿಯವರು ನಾಯಕನಾಗಿ ಗಿರಿಗಿಟ್‌ ಚಿತ್ರದಲ್ಲಿ ನಟಿಸಿದ್ದು, ಶಿಲ್ಪ ಶೆಟ್ಟಿಯವರು ನಾಯಕಿಯಾಗಿದ್ದಾರೆ. ಅರವಿಂದ್ ಬೋಳಾರ್‌ ಅವರು ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಭೋಜರಾಜ ವಾಮಂಜೂರು, ನವೀನ್‌ ಪಡೀಲ್‌ , ಪ್ರಸನ್ನ ಶೆಟ್ಟಿ ನಟಿಸಿದ್ದಾರೆ.

ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಬೇಸರವಾಗಿದೆ. ನಮಗೆ ಎಲ್ಲೂ ಮಾತನಾಡಲು ಅವಕಾಶ ಸಿಗಲಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಹೀಗೆ ಏಕಾಏಕಿ ತಡೆಯಾಜ್ಞೆ ನೀಡಿದ್ದಾರೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಒಬ್ಬ ಬೇಜವಾಬ್ಧಾರಿಯ ವಕೀಲನನ್ನು ತಮಾಷೆಯ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವಷ್ಟೇ. ನಮಗೆ ಸೆನ್ಸಾರ್‌ ಮಂಡಳಿ ಕೂಡಾ ಯು ಸರ್ಟಿಫಿಕೇಟ್‌ ನೀಡಿದೆ. ಆದರೂ ಈ ತಡೆಯಾಜ್ಞೆ ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಇದೇ ವೇಳೆ ಚಿತ್ರದ ನಿರ್ದೇಶಕ, ನಟ ರೂಪೇಶ್‌ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ತುಳು ಕಲಾವಿದರ ಒಕ್ಕೂಟದಿಂದ ತಡೆಯಾಜ್ಞೆ ಹಿಂಪಡೆಯಲು ಆಗ್ರಹ :

ಗಿರಿಗಿಟ್‌ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವುದು ಕೋಸ್ಟಲ್‌ ವುಡ್‌ ಗೆ ಆಘಾತಕಾರಿ ವಿಚಾರ. ಒಂದು ದೃಶ್ಯದಲ್ಲಿ ವಕೀಲರಿಗೆ ನಿಂದನೆಯಾಗಿದೆ ಎಂದು ಸಂಪೂರ್ಣ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿದೆ. ಕಾನೂನು ಹೋರಾಟ ಅಥವಾ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಹಾಗೂ ತಡೆಯಾಜ್ಞೆ ಹಿಂಪಡೆಯುವಂತೆ ಮನವಿ ಸಲ್ಲಿಸಲು ತುಳು ಚಿತ್ರ ರಂಗದ ಎಲ್ಲಾ ಕಲಾವಿದರು ಇಂದು ಮಧ್ಯಾಹ್ನ ಮೂರು ಗಂಟೆಗೆ ನ್ಯಾಯಾಲಯ ಸಂಕೀರ್ಣದಲ್ಲಿ ಸೇರಬೇಕೆಂದು ತುಳು ಕಲಾವಿದರ ಒಕ್ಕೂಟ ಮನವಿ ಮಾಡಿದೆ.

Comments are closed.