ಕರಾವಳಿ

ಹಾಲಾಡಿಯವರಿಗೆ ಸ್ಥಾನಮಾನ ನೀಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು: ಕೆ.ಎಸ್ ಈಶ್ವರಪ್ಪ

Pinterest LinkedIn Tumblr

ಕುಂದಾಪುರ: ಮಂತ್ರಿಗಳಿಗೆ ಉಪಮುಖ್ಯಮಂತ್ರಿಯಾಗುವಾಸೆ, ಉಪಮುಖ್ಯಮಂತ್ರಿಯಾದವರಿಗೆ ಮುಖ್ಯಮಂತ್ರಿಯಾಗುವ ಬಯಕೆ. ಶಾಸಕರಿಗೆ ಮಂತ್ರಿಗಳಾಗುವ ಹಂಬಲವಿರುತ್ತದೆ. ಎಲ್ಲರಿಗೂ ಆಪೇಕ್ಷೆಗಳಿರುವುದು ಸಾಮಾನ್ಯ. ಈಗಾಗಲೇ 17 ಮಂದಿ ಅನರ್ಹರಾದವರು ಕಾದಿದ್ದಾರೆ. ಅವರಿಗೆ ಪಕ್ಷದಲ್ಲಿ ಸ್ಥಾನ ನೀಡಲೇಬೇಕಾಗಿರುವುದು ನ್ಯಾಯಬದ್ಧ ಸಂಗತಿಯಾಗಿದೆ. ಅವರಿಲ್ಲದೇ ಇದ್ದರೆ ಬಿಜೆಪಿ ಸರಕಾರವೇ ಬರುತ್ತಿರಲಿಲ್ಲ. ಇಂತಹ ರಾಜಕೀಯ ಪರಿಸ್ಥಿತಿ ಇರುವಾಗ ಹೊಂದಿಕೊಂಡು ಹೋಗುವ ಕಾರ್ಯವಾಗಬೇಕು. ಕುಂದಾಪುರ ಶಾಸಕ ಹಾಲಾಡಿಯವರಿಗೆ ಸ್ಥಾನಮಾನ ನೀಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಕುಂದಾಪುರ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಭೇಟಿ ಕೊಟ್ಟ ವೇಳೆ ಮಾಧ್ಯಮದ ಜೊತೆ ಅವರು ಮಾತನಾಡುತ್ತಾ ಹಾಲಾಡಿಯವರಿಗೆ ಮಂತ್ರಿಗಿರಿ ತಪ್ಪಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕಾರ್ಯಕರ್ತರು ಈ ಭಾಗಕ್ಕೆ ಬರಬೇಕೆಂದು ಹೇಳಿದ್ದರ ಹಿನ್ನೆಲೆ ದೇವಸ್ಥಾನಗಳ ಭೇಟಿ ಮಾಡಿದ್ದು ಇದರಲ್ಲಿ ಯಾವುದೇ ವಿಶೇಷವಿಲ್ಲ ಎಂದರು.

ಮೊದಲು ಗರಂ…ಆಮೇಲೆ ಓಕೆ…!
ದೇವಸ್ಥಾನಕ್ಕೆ ಆಗಮಿಸಿದ ಈಶ್ವರಪ್ಪ ಮೊದಲು ಕಚೇರಿಯಲ್ಲಿ ವಿರಮಿಸಿದರು. ಆದಾಗ ಪತ್ರಕರ್ತರು ಬಂದು ಹಾಲಾಡಿಯವರ ವಿಚಾರ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಸಂಬಂದಪಟ್ಟ ಪ್ರಶ್ನೆ ಕೇಳಿದ್ದು ಇದಕ್ಕೆ ಉತ್ತರವನ್ನಿತ್ತರು. ಪತ್ರಕರ್ತರೋರ್ವರು ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲಾ ಉಅಸ್ತುವಾರಿ ತಪ್ಪಿದ್ದರ ಬಗ್ಗೆ ಕೇಳುತ್ತಲೇ ಸಿಡಿಮಿಡಿಗೊಂಡ ಸಚಿವ ಈಶ್ವರಪ್ಪ ‘ಆಗಿದ್ದನ್ನು ಕೇಳಿ, ಆಗದ್ದರ ಬಗ್ಗೆಯೇ ಯಾಕೆ ಕೇಳುತ್ತೀರಿ? ನೆಗೆಟಿವ್ ಆಗಿರೋದೆ ಪತ್ರಕರ್ತರ ಅಭಿಪ್ರಾಯವಾಗಿದೆ. ಒಳ್ಳೆದು ಕೇಳೋದೆ ಇಲ್ಲ ಎಂದು ಎದ್ದು ನಡೆದರು. ದೇವರ ದರ್ಶನ ಬಳಿಕ ಮಾಧ್ಯಮಗಳ ಜೊತೆ ಕೂಲ್ ಆಗಿಯೇ ಮಾತನಾಡಿದ್ರು.

ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಗೆಲವು…
ಮೈತ್ರಿ ಸರಕಾರದ ಅಭಿವ್ರದ್ಧಿಯ ಅಡಚಣೆಯಿಂದ ಹೊರಬಂದ ನಾಯಕರು ಕುತಂತ್ರದಿಂದ ಅನರ್ಹರಾಗಿದ್ದು ಚುನಾವಣಾ ಆಯೋಗ ಅವರು ಸ್ಪರ್ಧೆ ಮಾಡಲು ಸಮಸ್ಯೆಯಿಲ್ಲ ಎಂದು ಸ್ಪಷ್ಟನೆ ನೀಡಿದೆ. ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಹಾಗೂ ಅಭ್ಯರ್ಥಿ ಗೆಲುವಿನವರೆಗೂ ಬಿಜೆಪಿ ಎಲ್ಲಾ ಪ್ರಯತ್ನ ಮಾಡುತ್ತೆ. ಆಯಾ ಶಾಸಕರ ವೈಯಕ್ತಿಕ ವರ್ಚಸ್ಸು ಹಾಗೂ ಪ್ರಭಾವ ಬಿಜೆಪಿಯ ಪ್ರಬಲ ಸಂಘಟನೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಲಕ್ಷಾಂತರ ಕಾರ್ಯಕರ್ತರ ಮಧ್ಯೆ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿ ಶಾಸಕಾರಾಗುತ್ತಾರೆ. ಶಾಸಕರು ಆದ ಮಾತ್ರಕ್ಕೆ ಅವರೇ ಸುಪ್ರೀಂ ಅಲ್ಲ. ಟಿಕೇಟ್ ಬೇಕೆಂದು ಕೇಳುವುದೇ ಅತ್ರಪ್ತಿ ಅಲ್ಲ. ಬಿಜೆಪಿಯ ಏಕತೆ ಎನ್ನುವುದುಕಲ್ಲುಬಂಡೆಯಂತಿದೆ ಎಂದರು.

ವಿರೋಧ ಪಕ್ಷ ನಾಯಕನ ಆಯ್ಕೆ ಮಾಡುವ ಯೋಗ್ಯತೆಯಿಲ್ಲ…
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪರಿಸ್ಥಿತಿ ಡೋಲಾಯಮಾನವಾಗಿದೆ. ಕಾಂಗ್ರೆಸ್ ಈ ಹಿಂದೆ ೫ ವರ್ಷ ಆಡಳಿತ ಮಾಡಿದೆ ಎಂಬ ಹೇಳಿಕೆ ಬಿಟ್ಟರೆ ಒಬ್ಬ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಅವರಿಗಿಲ್ಲ. ಅವರ ಆಡಳಿತ ಸರಿಯಿಲ್ಲ ಎನ್ನುವ ಕಾರಣಕ್ಕೆ ಜನರು ಅವರನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ಏಕತೆ ಇಲ್ಲ. ಮೈತ್ರಿ ಬೇಕೋ ಬೇಡವೋ ಎಂಬುದರ ಬಗ್ಗೆಅವರಿಗೆ ಒಮ್ಮತವಿಲ್ಲ. ಜೆಡಿಎಸ್ ಕೂಡ ಮುಳುಗುವ ಹಡಗಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದು..ಕುಮಾರಸ್ವಾಮಿ ಇಬ್ಬರೂ ಅವಕಾಶವಾದಿಗಳು!
ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ಕೂಡ ಅವಕಾಶವಾದಿ ರಾಜಕಾರಣಿಗಳು. ರಾಜ್ಯದ ಜನ ಮೈತ್ರಿಯನ್ನು ಮೂಲೆಗೆ ತಳ್ಳಿದೆ. ಉಪಚುನಾವಣೆಯಲ್ಲಿ ಅವರು ಒಂದು ಸೀಟು ಗೆಲ್ಲುವುದು ಇಲ್ಲ ಎಂದು ಈಶ್ವರಪ್ಪ ಗುಡುಗಿದರು.

ಆನೆಗುಡ್ಡೆಯಲ್ಲಿ ಭಕ್ತಿ-ಭಾವ..
ಆನೆಗುಡ್ಡೆ ಶ್ರೀ ವಿನಾಯಕನ ಸನ್ನಿಧಿಗೆ ಈ ಹಿಂದೆಯೂ ಕೆ.ಎಸ್. ಈಶ್ವರಪ ಭೇಟಿ ಕೊಟ್ಟಿದ್ದನ್ನು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕರು ಸ್ಮರಿಸಿದರು. ಗಣಪನ ದರ್ಶನ ಪಡೆಯುವ ವೇಳೆ ಸಚಿವರ ಪುತ್ರಿ ಕನಕಾ ಅವರು ‘ಶರಣು ಶರಣು ಹೇ ಗಣಪನೇ ನಿನಗೆ ವಂದನೆ’ ಶ್ಲೋಕ ಹೇಳಿದ್ದು ಈಶ್ವರಪ್ಪ ಕೂಡ ಇದಕ್ಕೆ ಧ್ವನಿಗೂಡಿಸಿದರು. ದೇವಳದ ವತಿಯಿಂದ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು.

ದೇವಾಲಯ ಭೇಟಿ ವೇಳೆ ಈಶ್ವರಪ್ಪ ಪತ್ನಿ ವಿಜಯಲಕ್ಷ್ಮೀ, ಪುತ್ರಿ ಕನಕಾ, ಬಿಜೆಪಿ ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಮೋದಿ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಸ್ಥಳೀಯ ಬಿಜೆಪಿ ಮುಖಂಡ ಗಣೇಶ್ ಭಟ್, ರೈತ ಮೋರ್ಚಾ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಕಾರ್ಯದರ್ಶಿ ಧೀರಜ್ ಮೊದಲಾದವರಿದ್ದರು.

ಈ ಮೊದಲು ಮಂದರ್ತಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಭೇಟಿ ಹಾಗೂ ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಘೊಂಡು ಅಲ್ಲಿಯೇ ಅನ್ನಪ್ರಸಾದ ಸ್ವೀಕರಿಸಿದ್ದರು. ಆನೆಗುಡ್ಡೆ ಬೇಟಿ ಬಳಿಕ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.