ಬೆಂಗಳೂರು: ಐಪಿಎಸ್ ಅಧಿಕಾರಿಯಾಗಿದ್ದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದಾಗಲೇ ಸೇವೆಗೆ ರಾಜಿನಾಮೆ ನೀಡಿದ ಕೆ. ಅಣ್ಣಾಮಲೈ ಅವರ ರಾಜೀನಾಮೆ ಅಂಗೀಕಾರವಾಗಿದೆ. 2019 ಮೇ 28ರಂದು ಅಣ್ಣಾಮಲೈ ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಖಡಕ್ ಹಾಗೂ ದಕ್ಷ ಐಪಿಎಸ್ ಅಧಿಕಾರಿ ಎಂದೇ ಫೇಮಸ್ ಆಗಿದ್ದ ಅಣ್ಣಾಮಲೈ ರಾಜಿನಾಮೆಯನ್ನು ಬುಧವಾರ ರಾಜ್ಯ ಗೃಹ ಸಚಿವಾಲಯ ಅಂಗೀಕರಿಸಿದೆ. ರಾಜಿನಾಮೆ ನೀಡುವ ಸಂದರ್ಭ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು.
2011ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಮೊದಲು ಕಾರ್ಕಳ ಉಪವಿಭಾಗದ ಎಎಸ್ಪಿ ಆಗಿದ್ದು ಬಳಿಕ ಉಡುಪಿ ಜಿಲ್ಲಾ ಎಸ್ಪಿ ಆಗಿದ್ದರು.ಕೋಮು ಗಲಭೆ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಅಪರಾಧ ಚಟುವಟಿಕೆಗಳ ಪತ್ತೆಯಲ್ಲಿ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾರ್ಯರೂಪಕ್ಕೆ ತಂದವರು. ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು.
ವೈಯಕ್ತಿಕ ಕಾರಣಗಳನ್ನು ನೀಡಿ ರಾಜಿನಾಮೆ ನೀಡಿದ ಅಣ್ಣಾಮಲೈ ರಾಜಕೀಯಕ್ಕೆ ದುಮುಕುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತಾದರೂ ಕೂಡ ಅದನ್ನು ಸ್ವತಃ ಅವರು ಅಲ್ಲಗಳೆದಿದ್ದರು.
ರಾಜಿನಾಮೆ ಬಳಿಕ ಅಣ್ಣಾಮಲೈ ಶಬರಿಮಲೆ ಕ್ಷೇತ್ರ, ಉಡುಪಿಯ ಕೊಲ್ಲೂರು ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.
ಸದ್ಯ ರಾಜಿನಾಮೆ ಅಂಗೀಕಾರವಾಗಿದ್ದು ಅಣ್ಣಾಮಲೈ ಅವರ ಮುಂದಿನ ನಡೆಯೇನು ಎಂಬುದು ಸದ್ಯದ ಕುತೂಹಲವಾಗಿದೆ.
Comments are closed.