ಕರಾವಳಿ

ಗೋಪಾಡಿ ಪಡು ಶಾಲೆಯ ನಲಿಕಲಿ ತರಗತಿ ಗೋಡೆ ಬಿರುಕು: ಆತಂಕದಲ್ಲೇ ಪಾಠ, ಪ್ರವಚನ!

Pinterest LinkedIn Tumblr

ಕುಂದಾಪುರ: ಹಲವು ವರ್ಷಗಳ ಇತಿಹಾಸವುಳ್ಳ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿನ ಗೋಪಾಡಿ ಪಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕಟ್ಟಡದ ಗೋಡೆ ಎರಡು ಕಡೆಗಳಲ್ಲಿ ಬಿರುಕುಬಿಟ್ಟಿದ್ದು ಆತಂಕದ ನಡುವೆಯೇ ಮಕ್ಕಳು ವಿದ್ಯಾರ್ಜನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಂದರಿಂದ ಐದನೇ ತರಗತಿಯಿರುವ ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವ ಕಾರಣಕ್ಕಾಗಿಯೇ ಆಸುಪಾಸಿನ 24 ವಿದ್ಯಾರ್ಥಿಗಳು ಬರುತ್ತಿದ್ದು ನಲಿಕಲಿ ತರಗತಿಯಲ್ಲೇ  13 ವಿದ್ಯಾರ್ಥಿಗಳಿದ್ದಾರೆ. ಎರಡು ತಿಂಗಳ ಹಿಂದೆ ಮಳೆಗಾಲದಲ್ಲಿ ತರಗತಿ ಕೊಠಡಿಯ ಗೋಡೆ ಸಂಪೂರ್ಣ ಬಿರುಕುಬಿಟ್ಟಿದ್ದು ಗೋಡೆ ಶಿಥೀಲಗೊಂಡಿದೆ. ನಿತ್ಯ ಅಪಾಯದ ನಡುವೆಯೇ ಪಾಠ ಮಾಡುವಂತಾಗಿದೆ. ಈ ಬಗ್ಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ ಶಾಸಕರು ಹಾಗೂ ಗೋಪಾಡಿ ಗ್ರಾಮಪಂಚಾಯತಿಗೂ ಮಾಹಿತಿ ನೀಡಲಾಗಿದೆ. ಗ್ರಾಮಪಂಚಾಯ್ತ್ ಈ ಬಗ್ಗೆ ಸ್ಪಂದಿಸಿದ್ರೂ ಕೂಡ ಇಲಾಖಾ ಮಟ್ಟದಲ್ಲಿ ಯಾವುದೇ ಕೆಲಸವೂ ಆಗಿಲ್ಲ.

ಒಂದೆರಡು ದಿನಗಳಿಂದ ಮತ್ತೆ ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು ಮಕ್ಕಳು ಭಯದ ನಡುವೆಯೇ ಶಾಲೆಗೆ ಬರುವಂತಾಗಿದೆ. ಕೂಡಲೇ ನಲಿಕಲಿ ಕೊಠಡಿಯ ಅವ್ಯವಸ್ಥೆ ಬಗ್ಗೆ ಸಂಬಂದಪಟ್ಟವರು ಸ್ಪಂದನೆ ನೀಡಬೇಕಿದ್ದು ಇಲ್ಲವಾದಲ್ಲಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸೋದಿಲ್ಲ ಎಂದು ಪೋಷಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.