ಮಂಗಳೂರು, ಅಕ್ಟೋಬರ್. 24: ಅರಬ್ಬೀ ಸಮದ್ರ ಮತ್ತು ಲಕ್ಷ ದ್ವೀಪದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದ.ಕ.ಜಿಲ್ಲೆ ಸೇರಿದಂತೆ ಮಂಗಳೂರು ನಗರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮತ್ತೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಅರಬ್ಬೀ ಸಮದ್ರ ಮತ್ತು ಲಕ್ಷ ದ್ವೀಪದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ನಗರದಲ್ಲಿ ಕೆಲವು ತಗ್ಗು ಪ್ರದೇಶಗಳು ಜಲವೃತ್ತಗೊಂಡಿದೆ. ಅ. 18ರಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿಗಳಿ ತಿಳಿಸಿದ್ದಾರೆ.
ಆದರೆ ಮಳೆಯಿಂದಾಗಿ 33 ಮನೆಗಳಿಗೆ ಭಾಗಶ: ಹಾನಿಯಾಗಿದ್ದು, 9 ಮನೆಗಳಿಗೆ ತೀವ್ರವಾದ ಹಾನಿಯಾಗಿದೆ. ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಹಾನಿಗೆ ಸಂಬಂಧಿಸಿ ಘೋಷಿಸಲಾದ ತೀವ್ರ ಹಾನಿಗೆ 5 ಲಕ್ಷ ರೂ.ನಂತೆ ಹಾಗೂ ಭಾಗಶ: ಹಾನಿಗೊಳಗಾದವರಿಗೆ ತಲಾ 50,000 ರೂ.ನಂತೆ ಪರಿಹಾರವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಅರಬ್ಬಿ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವದಿಂದ ಕೇರಳ, ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಅಲ್ಲಲ್ಲಿ ಹೆಚ್ಚು ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮೊದಲಿಗೆ ಆರೆಂಜ್ ಅಲರ್ಟ್ (64.5 ಮಿ.ಮೀ ನಿಂದ 115.5 ಮಿ.ಮೀ ವರೆಗೆ ಮಳೆ ಬೀಳುವ ಸಾಧ್ಯತೆ) ಘೋಷಿಸಿದ್ದು, ಇದೀಗ ರೆಡ್ ಆಲರ್ಟ್ ಸೂಚನೆ ನೀಡಿರುತ್ತಾರೆ.
ಸಾರ್ವಜನಿಕರು ಈ ಅವಧಿಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Comments are closed.