ಕರಾವಳಿ

ನವೆಂಬರ್ 6 ರಿಂದ 8 : ಪಿಲಿಕುಳ-ಅಂತರಾಷ್ಟ್ರೀಯ 3ಡಿ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ

Pinterest LinkedIn Tumblr

ಮಂಗಳೂರು : ತಾರಾಲಯ ತಂತ್ರಜ್ಞಾನವು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿದ್ದು ಈ ಬಗ್ಗೆ ದೇಶದ ಹಾಗೂ ಹೊರದೇಶದ ವಿವಿಧ ತಾರಾಲಯಗಳ ಮುಖ್ಯಸ್ಥರು, ತಂತ್ರಜ್ಞರು ಹಾಗೂ ಅಧಿಕಾರಿಗಳೊಡನೆ ಸಂವಹನ, ಸಂಪರ್ಕ ಮತ್ತು ತಾರಾಲಯದ ಬಹುಮುಖಿ ಕಾರ್ಯಗಳಲ್ಲಿ ಸಹಕಾರದ ಚರ್ಚೆ ಕುರಿತು ಪಿಲಿಕುಳದ ಮೊದಲ ಅಂತರಾಷ್ಟ್ರೀಯ ಮಟ್ಟದ ಫುಲ್ ಡೋಮ್ ಫಿಲ್ಮ್ ಫೆಸ್ಟಿವಲ್ ಮತ್ತು ತಾರಾಲಯದ ಸಮ್ಮೇಳನವನ್ನು ನವೆಂಬರ್ 6 ರಿಂದ 8 ರವರೆಗೆ ಆಯೋಜಿಸಲಾಗಿದೆ.

ತಾರಾಲಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಜ್ಞರಿಂದ ವಿವರಣೆ, ಫುಲ್‍ಡೋಮ್ 2ಡಿ, 3ಡಿ ಚಿತ್ರಗಳ ತಯಾರಿಯ ಮಾಹಿತಿ, ಪ್ರದರ್ಶನಗಳ ವಿಷಯ ಮತ್ತು ಹೊಸ ಸಾಧ್ಯತೆಗಳು, ತಾರಾಲಯಗಳಲ್ಲಿ ನಡೆಸಬಹುದಾದ ಶೈಕ್ಷಣಿಕ ಕಾರ್ಯಕ್ರಮಗಳು, ಇವುಗಳನ್ನು ಸಾಧಿಸಲು ತಾರಾಲಯಗಳ ಪರಸ್ಪರ ಸಂಪರ್ಕ ಇತ್ಯಾದಿಗಳನ್ನು ಸ್ಥೂಲವಾಗಿ ಚರ್ಚಿಸಲಾಗಿದೆ.

ಮುಖ್ಯವಾಗಿ ಪಿಲಿಕುಳವನ್ನು ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಮತ್ತು ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನಗಳು ಸತತವಾಗಿ ನಡೆಯುವಲ್ಲಿ ಇದು ಪೂರಕವಾಗಿದೆ.

ಖಗೋಳಶಾಸ್ತ್ರ ಮತ್ತು ವಿಜ್ಞಾನ ಸಂಬಂಧಿ ವಿಷಯಗಳ ಮೇಲೆ ಸಂಚಾರಿ ತಾರಾಲಯದ ಹಲವು ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಗಳಿಂದ ಕೂಡ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಶುಭ್ರ ಆಕಾಶವಿದ್ದಲ್ಲಿ ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರದರ್ಶನಗೊಳ್ಳಲು 2ಡಿ, 3ಡಿ ಫುಲ್ ಡೋಮ್ ಫಿಲ್ಮ್‍ಗಳ ನಿರ್ಮಾಪಕರು ಚಿತ್ರಗಳನ್ನು ನೀಡಿರುತ್ತಾರೆ. ವಿವರಗಳನ್ನು ಪಿಲಿಕುಲದ ಅಧಿಕೃತ ವೆಬ್‌ಸೈಟ್ ಮೂಲಕ ನೋಡಬಹುದು ಮತ್ತು ಬುಕ್‍ಮೈಶೋ ಮೂಲಕ ಕಾಯ್ದಿರಿಸಬಹುದು.

ಸಾರ್ವಜನಿಕರು ಪಿಲಿಕುಳದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ 2ಡಿ, 3ಡಿ ತಾರಾಲಯ ಚಿತ್ರಗಳ ಪ್ರದರ್ಶನಗಳನ್ನು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ, ದ. ಕ. ಜಿಲ್ಲೆ ಹಾಗೂ ಅಧ್ಯಕ್ಷರು, ಪಿ. ಪ್ರಾ. ವಿ. ಕೇಂದ್ರ ಸೊಸೈಟಿ ಇವರು ತಿಳಿಸಿದ್ದಾರೆ.

Comments are closed.