ಮಂಗಳೂರು : ಮಂಗಳೂರು ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಗಾಂಜಾ ಸಹಿತಾ ಸುಮಾರು 5 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಮಂಗಳೂರಿನ ಅಯುಕ್ತರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಕೊಡ್ಲಮೊಗರು ನಿವಾಸಿ ಅಬೂಬಕರ್ ಸಮದ್ (24), ಕಾಸರಗೋಡು ಕಡಂಬಾರು ನಿವಾಸಿಗಳಾದ ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22) ಹಾಗೂ ಮುಹಮ್ಮದ್ ಅರ್ಷದ್ (18) ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 2.5 ಲಕ್ಷ ಮೌಲ್ಯದ ಹುಂಡೈ ಕಾರು, 50 ಸಾವಿರ ರೂ. ಮೌಲ್ಯದ ಸ್ಕೂಟರ್, ಮೂರು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಅಪರಾಧದ ಹಿನ್ನೆಲೆಯ ತನಿಖೆ ನಡೆಯುತ್ತಿದೆ. ಈ ಬಗ್ಗೆ ಮುಂಬೈ ಪೊಲೀಸರಿಗೂ ಮಾಹಿತಿ ಒದಗಿಸಲಿದ್ದೇವೆ. ಮಾದಕ ಕೃತ್ಯದಲ್ಲಿ ಎಂತಹ ಪ್ರತಿಷ್ಠಿತ ವ್ಯಕ್ತಿಯೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಯುಕ್ತರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಸಾಗಾಟ ನಡೆಯುತ್ತಿರುವ ಘಟನೆಗಳೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಚಾಲಕರು ಯಾರೋ ಕೊಟ್ಟ ಕವರ್ಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಅಯುಕ್ತರು ಹೇಳಿದರು.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದರು.
Comments are closed.