ಮಡಿಕೇರಿ: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮಡಿಕೇರಿ ನಿವಾಸಿ ಯುವತಿಯನ್ನು ಮದುವೆಯಾದ ಭೂಪನೋರ್ವ ಅದನ್ನು ನಂಬಿಸಲು ಹೋಗಿ ಆತನ ಮೂವರು ಸ್ನೇಹಿತರ ಸಹಿತ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ನಾಲ್ವರನ್ನು ನಾಪೋಕ್ಲು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಮಿಥುನ್, ಪಾಲಕ್ಕಾಡ್‌ನ ಮನೋಜ್, ಅಬು ತಾಹಿರ್ ಹಾಗೂ ವಿನೋದ್ ಎನ್ನುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಝೈಲೋ ವಾಹನ, ಐಪಿಎಸ್ ಬೆಲ್ಟ್, ಐಪಿಎಸ್ ಬ್ಯಾರೆಟ್ ಕ್ಯಾಪ್, ಐಪಿಎಸ್ ಪೀಕ್ ಕ್ಯಾಪ್, 2 ಸೆರಮೋನಿಯಲ್ ಬೆಲ್ಟ್, ವಾಹನಕ್ಕೆ ಅಳವಡಿಸುವ ಸ್ಟಾರ್ ಮತ್ತು ಬಾವುಟ, ಫೈಬರ್ ಲಾಟಿ, ಐಪಿಎಸ್ ಅಧಿಕಾರಿ ಧರಿಸುವ ಸಮವಸ್ತ್ರ ಹಾಗೂ ಶೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಮಿಥುನ್ ತಾನು ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮಡಿಕೇರಿಯ ನಾಲಾಡಿ ಗ್ರಾಮದಲ್ಲಿದ್ದ ಕೇರಳ ಮೂಲದ ಹುಡುಗಿಯನ್ನು ಕೇರಳದಲ್ಲಿ ಮದುವೆಯಾಗಿದ್ದ. ಮಿಥುನ್ ಐಪಿಎಸ್ ಅಧಿಕಾರಿ ಎಂದು ಸುಳ್ಳು ಹೇಳಿದ್ದು ತಿಳಿದಾಗ ಆ ಯುವತಿ ಕೇರಳದಲ್ಲಿ ದೂರು ದಾಖಲಿಸಿಊರಿಗೆ ವಾಪಾಸ್ಸಾಗಿದ್ದಳು. ಪತ್ನಿ ತನ್ನ ತೊರೆದಿದ್ದು ತಾನು ಐಪಿಎಸ್ ಅಧಿಕಾರಿ ಆಗಿರುವುದಾಗಿ ಹುಡುಗಿಯ ಸಂಬಂಧಿಕರನ್ನು ನಂಬಿಸಲು ಐಪಿಎಸ್ ಗೆಟಪ್ ತೊಟ್ಟು ಬಂದಿದ್ದ. ಮಡಿಕೇರಿ ತಾಲೂಕಿನ ನಾಲಾಡಿ ಗ್ರಾಮದಲ್ಲಿ ನಾಲ್ಕು ಜನ ಯುವಕರು ವಾಹನದಲ್ಲಿ ಬಂದು, ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಭೂಪನ ಕಿಡಿಗೇಡಿತನ ಬಯಲಾಗಿದೆ. ಪ್ರಕರಣ ದಾಕಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.