ಮಂಗಳೂರು, ನವೆಂಬರ್.11 : ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ (ನಾಳೆ) ನವೆಂಬರ್ 12ರಂದು ನಡೆಯಲಿರುವ ಚುನಾವಣೆಗೆ ಜಿಲ್ಲಾಡಳಿತ ವಿಶೇಷ ಸಿದ್ದತೆಗಳನ್ನು ಮಾಡಿದ್ದು, ಈಗಾಗಲೇ ನಗರದ ರೋಸರಿಯು ಶಾಲೆಯಲ್ಲಿ ಮಾಸ್ಟರಿಂದ ಕೆಲಸ ಆರಂಭವಾಗಿದೆ.
ನಗರದ ರೋಸರಿಯು ಶಾಲೆಯಲ್ಲಿ ಮತಗಟ್ಟೆಗೆ ಸಾಗಿಸಲು ಮತಯಂತ್ರಗಳನ್ನು ಸಜ್ಜು ಮಾಡಲಾಗುತ್ತಿದ್ದು, ಮತಗಟ್ಟೆಗಳಿಗೆ ಮತಯಂತ್ರವನ್ನ ಸಾಗಿಸಲು ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಾಳೆ ಚುನಾವಣೆ ನಡೆಯಲಿದ್ದು, ನ.14 ರಂದು ಮತ ಎಣಿಕೆ ನಡೆಯಲಿದೆ.
ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಒಟ್ಟು 60 ವಾರ್ಡ್‌ಗಳಿದೆ. ಈ ವಾರ್ಡ್’ಗಳಿಗೆ ಒಟ್ಟು 12 ಚುನಾವಣಾಧಿಕಾರಿ, 12 ಉಪ ಚುನಾವಣಾಧಿಕಾರಿಗಳಿದ್ದಾರೆ. ಒಟ್ಟು 448 ಬೂತ್‌ಗಳಿದ್ದು ಇದಕ್ಕೆ 485 ಪ್ರತಿಯೊಂದು ಬೂತ್’ಗೂ ತಲಾ ಒಬ್ಬರಂತೆ ಮತಗಟ್ಟೆ ಅಧ್ಯಕ್ಷ ಅಧಿಕಾರಿ (ಪಿಆರ್‌ಒ), ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು (ಎಪಿಆರ್‌ಒ) ನೇಮಕ ಮಾಡಲಾಗಿದೆ. ಮಾತ್ರವಲ್ಲ, ಹೆಚ್ಚುವರಿಯಾಗಿ ಶೇ.30ರಷ್ಟು ಅಧಿಕಾರಿಗಳನ್ನು, ಸಿಬಂದಿಗಳನ್ನು ಕಾಯ್ದಿರಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗೆ ಒಟ್ಟು 234 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ 66, ಬಿಜೆಪಿ 94, ಜೆಡಿಎಸ್ 14, ಸಿಪಿಐ 1, ಸಿಪಿಎಂ 8, ಎಸ್‌ಡಿಪಿಐ 10, ಜೆಡಿಯು 2, ಡಬ್ಲ್ಯೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3, ಪಕ್ಷೇತರರು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 180 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪಾಲಿಕೆಯ 21 ವಾರ್ಡ್ ಗಳಲ್ಲಿ ನೇರಸ್ಪರ್ಧೆ , 24 ವಾರ್ಡ್ ಗಳಲ್ಲಿ ತ್ರಿಕೋನ, 9 ವಾರ್ಡ್ ಗಳಲ್ಲಿ ಚತುಷ್ಕೋನ ಹಾಗೂ 6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ ಇದೆ.
ಅಂತಿಮ ಹಂತದ ಕಸರತ್ತಿನಲ್ಲಿ ಅಭ್ಯರ್ಥಿಗಳು :
ಈಗಾಗಲೇ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನಲೆಯಲ್ಲಿ. ಮನೆಮನೆ ಭೇಟಿಯ ಮೂಲಕ ಮತದಾರರ ಮನಗೆಲ್ಲಲು ಅಂತಿಮ ಕಸರತ್ತಿನಲ್ಲಿ ಎಲ್ಲಾ ವಾರ್ಡ್ ಅಭ್ಯರ್ಥಿಗಳು ತೊಡಗಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಹೀಗಾಗಿ ಬಹಿರಂಗ ಸಭೆ, ರೋಡ್ ಶೋ ಗೆ ಅವಕಾಶವಿಲ್ಲ.
ಮನೆ ಮನೆ ಪ್ರಚಾರಕ್ಕೆ ಇಂದು ಸಂಜೆವರೆಗೆ ಅವಕಾಶವಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳು, ಪಕ್ಷಗಳ ಕಾರ್ಯಕರ್ತರು, ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಮನಗೆಲ್ಲುವ ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿದ್ದಾರೆ.
Comments are closed.