ಕರಾವಳಿ

ಮನಪಾ ಚುನಾವಣೆಯ ಮತ ಎಣಿಕೆ ಆರಂಭ :ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆ – ನಿಷೇಧಾಜ್ಞೆ

Pinterest LinkedIn Tumblr

ಮಂಗಳೂರು ನವೆಂಬರ್ 14 : ಮಂಗಳೂರು ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಡೀದ್ದು, ಏಣಿಕೆ ಕಾರ್ಯ ನಡೆಯುತ್ತಿರುವ ರೊಸಾರಿಯೋ ಶಾಲೆಯ ಸುತ್ತಮುತ್ತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ. ಏಣಿಕೆ ಕೇಂದ್ರಕ್ಕೆ ಬರುತ್ತಿರುವ ವರನ್ನು ಪೊಲೀಸರು ತೀವ್ರ ತಪಾಷಣೆ ನಡೆಸುತ್ತಿದ್ದಾರೆ. ಪಾಸ್ ಹೊಂದಿದ್ದವರನ್ನು ಮಾತ್ರ ಕೇಂದ್ರದೊಳಗೆ ಬಿಡಲಾಗುತ್ತಿದೆ.

ತಲಾ 5 ವಾರ್ಡ್‍ಗೆ ಒಬ್ಬರಂತೆ ಒಟ್ಟು 12 ಚುನಾವಣಾಧಿಕಾರಿಗಳು 12 ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಿದ್ದಾರೆ. ಆಯಾ ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್‍ನ ಮತ ಎಣಿಕೆ ಕೈಗೊಳ್ಳಲಿದ್ದಾರೆ. ಒಂದು ಸುತ್ತಿನಲ್ಲಿ 4 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರ ಸುತ್ತಮುತ್ತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ.

ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಬರುವಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ನವೆಂಬರ್ 14 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಾಂಡೇಶ್ವರ ರೋಸಾರಿಯೋ ಶಾಲೆಯ ಮತ ಎಣಿಕೆ ಕೇಂದ್ರದ ಸುತ್ತ ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ : 144 ರ ಅನ್ವಯ ನಿರ್ಬಂಧಕ ಆಜ್ಞೆಯನ್ನು ವಿಧಿಸಿ ಮಂಗಳೂರು ಪೊಲೀಸು ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಡಾ. ಹರ್ಷಾ ಪಿ.ಎಸ್. ಆದೇಶಿಸಿರುತ್ತಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟುಮಾಡುವ ಇತರ ಯಾವುದೇ ವಸ್ತುಳನ್ನು ಸಾಗಿಸಬಾರದು. ಪಟಾಕಿ ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಸಿಡಿಸಬಾರದು. ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸಬಾರದು. ಕಲ್ಲುಗಳನ್ನು ಇತರ ಕ್ಷಿಪಣಿಗಳನ್ನು ಎಸೆಯುವ ಅಥವ ವೇಗದಿಂದ ಒಯ್ಯುವ ಸಾಧನ/ ಉಪಕರಣಗಳನ್ನು ಸರಬರಾಜು ಮಾಡುವುದು, ತಯಾರಿಸುವುದು ಶೇಖರಣೆ ಮಾಡುವುದನ್ನು ನಿಷೇಧಿಸಿದೆ. ವ್ಯಕ್ತಿಗಳ ಅಥವಾ ಅವರ ಶವಗಳ/ ಆಕೃತಿಗಳ / ಪ್ರತಿಕೃತಿಗಳ ಪ್ರದರ್ಶನ ಮಾಡಬಾರದು.

ಬಹಿರಂಗ ಘೋಷಣೆ ಮಾಡುವುದು, ಹಾಡುಗಳನ್ನು ಹಾಡುವುದು, ಸಂಗೀತ ನುಡಿಸುವುದು, ಆವೇಶಕಾರಿ ಭಾಷಣ ಮಾಡುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರಗಳನ್ನು ಅಥವ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಈ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರಕಾರದಿಂದ ಯಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯವಾಗುವದಿಲ್ಲ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ…

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್‌ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಶೇ. 59.67 ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿತ್ತು. ಒಟ್ಟು 3,94,894 ಮತದಾರರಲ್ಲಿ 1,13,084 ಪುರುಷರು, ಮತ್ತು 1,22,527 ಮಹಿಳೆಯರು ಸೇರಿ ಒಟ್ಟು 2,35,628 ಮಂದಿ ಮತ ಚಲಾಯಿಸಿದ್ದಾರೆ. ಅಲ್ಲದೆ, 17 ತೃತೀಯ ಲಿಂಗಿಗಳೂ ಮತ ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 3,87,465 ಮತದಾರರಿದ್ದು, ಇದರಲ್ಲಿ 1,99,989 ಪುರುಷರಿದ್ದರೆ, 1,87,465 ಸ್ತ್ರೀಯರಿದ್ದಾರೆ. 63 ತೃತೀಯ ಲಿಂಗಿಗಳಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಸ್ತ್ರೀಯರು ಎರಡನೇ ಸ್ಥಾನದಲ್ಲಿದ್ದರೂ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ವಿಶೇಷ.

Comments are closed.