ಮಂಗಳೂರು: ನಗರದ ಅತ್ಯಂತ ಪುರಾತನ ದೇವಸ್ಥಾನವಾದ ಉರ್ವ ಮಾರಿಯಮ್ಮ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, 2019-20 ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸಿ ಸ್ಥಳಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಉರ್ವ ಮಾರಿಯಮ್ಮ ಕ್ಷೇತ್ರಕ್ಕೆ 50 ಲಕ್ಷ ಮಂಜೂರಾಗಿದ್ದು ಅದರಲ್ಲಿ ಪ್ರಸ್ತುತ ಸಾಲಿನಲ್ಲಿ 25 ಲಕ್ಷ ರೂಪಾಯಿಗಳು ಮೊದಲ ಹಂತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಮಂಗಳೂರನ್ನು ಪ್ರವಾಸಿ ತಾಣವಾಗಿಸಲು ಬೇಕಾಗಿರುವ ಅನುದಾನವನ್ನು ನೀಡುವಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿ ನಡೆಯಲಿದೆ. ಈಗಾಗಲೇ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ 6 ಕುದ್ರುಗಳು, ಸುಲ್ತಾನ್ ಬತ್ತೇರಿ, ಬೆಂಗರೆ ಪ್ರದೇಶಗಳ ಅಭಿವೃದ್ಧಿಯ ಕುರಿತು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸರಕಾರದೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಶಾಸಕರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಸಾಕಷ್ಟು ಇದೆ. ಮಾರಿಗುಡಿ ದೇವಸ್ಥಾನದಂತೆ ಅತೀ ಪುರಾತನ ದೇವಾಲಯಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದೆ. ಅವೆಲ್ಲವನ್ನೂ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.
Comments are closed.