ಮಂಗಳೂರು, ನವೆಂಬರ್ 19: ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಅಜ್ಜ ಹಾಗೂ ಮೊಮ್ಮಗಳನ್ನು ಕತ್ತುಸೀಳಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಪುತ್ತೂರು ಹೊರವಲಯದ ಕುರಿಯ ಹೊಸಮಾರು ಎಂಬಲ್ಲಿ ನಡೆದಿದೆ.
ಕುರಿಯ ನಿವಾಸಿ ಕೊಗ್ಗು ಸಾಹೇಬ್ (65) ಮತ್ತು ಅವರ ಮೊಮ್ಮಗಳು 9ನೇ ತರಗತಿ ವಿದ್ಯಾರ್ಥಿನಿ ಸಮೀಹ ಬಾನು ಕೊಲೆಯಾದವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೊಗ್ಗು ಸಾಹೇಬರ ಪತ್ನಿ ಖತೀಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿಗಳು ಯಾರೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುರಿಯದ ಹೊಸಮಾರು ಎಂಬಲ್ಲಿನ ಮನೆಯಲ್ಲಿ ಕೊಗ್ಗು ಸಾಹೇಬ್ ಅವರ ಮೊಮ್ಮಗಳು ಸಮೀಹಾ ಬಾನು, ಪತ್ನಿ ಖದೀಜಾಬಿ ಮೂವರೇ ಇದ್ದು, ದುಷ್ಕರ್ಮಿಗಳು ಇವರಲ್ಲಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದಿದ್ದಾರೆ. ಕೊಗ್ಗು ಸಾಹೇಬರ ಪತ್ನಿ ಖತೀಜಾ ಅವರು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಯಾದ ಕೊಗ್ಗು ಸಾಹೇಬರವರ ಪುತ್ರ ರಝಾಕ್ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ಮಂಗಳವಾರ ಬೆಳಗ್ಗೆ ಹೊಸಮಾರು ಮನೆಗೆ ಬಂದಾಗ ಮೂವರು ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದೆ. ಕೊಲೆಯ ಹಿಂದಿನ ಹಂತಕರು ಯಾರೆಂಬುದು ತಿಳಿದುಬಂದಿಲ್ಲ. ಕೊಲೆಯ ಉದ್ದೇಶವೂ ತಿಳಿದುಬಂದಿಲ್ಲ. ಸಂಪ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Comments are closed.