ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ – ‘ಕೃಷ್ಣಾಭಿವಂದನಂ’
ಮಂಗಳೂರು: ‘ಕಳೆದ ಆರು ವರ್ಷಗಳಿಂದ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ನುಡಿಹಬ್ಬವಾಗಿ ತಾಳಮದ್ದಳೆ ಸಪ್ತಾಹವನ್ನು ಆಚರಿಸುತ್ತಿರುವ ಯಕ್ಷಾಂಗಣದ ಕಾರ್ಯ ಅನುಪಮವಾದುದು. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸುವಲ್ಲಿ ಶ್ರೇಷ್ಠ ಸೇವೆ.ಇದಕ್ಕೆ ವಿಶ್ವವಿದ್ಯಾನಿಲಯದ ಬೆಂಬಲವಿದೆ’ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ -ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ (ರಿ.)ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ನಗರದ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಂಡಿರುವ ಏಳನೇ ವರ್ಷದ ನುಡಿ ಹಬ್ಬ ‘ ಯಕ್ಷಗಾನ ತಾಳಮದ್ದಳೆ ಸಪ್ತಾಹ -2019 ‘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಪೀಠದಲ್ಲಿ ಪ್ರಸ್ತುತ ಒಂದು ಕೋಟಿ ರೂ. ಮೂಲಧನವಿದೆ. ಇದರ ಶೇ. 90 ಭಾಗ ಸಿಬ್ಬಂದಿಯ ವೇತನಕ್ಕೆ ಬೇಕಾಗುತ್ತದೆ. ಹೆಚ್ಚುವರಿ ಅನುದಾನ ನೀಡುವಂತೆ ಸರಕಾರವನ್ನು ಕೋರಲಾಗುವುದು. ಬಳಿಕ ಮಂಗಳೂರು ವಿವಿ ಮತ್ತು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಿರಂತರ ನಡೆಸಲಾಗುವುದು. ಯಕ್ಷಗಾನದಲ್ಲಿ ಒಳ್ಳೆಯ ಬದಲಾವಣೆ ಆಗಬೇಕು. ಯುವಜನತೆ ಯಕ್ಷಗಾನ ವೀಕ್ಷಿಸುವ, ತಾಳಮದ್ದಳೆ ಆಸ್ವಾದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಯಕ್ಷಗಾನದ ಮುನ್ನಡೆ ಅಬಾಧಿತ:
ಸಪ್ತಾಹ ಉದ್ಘಾಟಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ‘ಸಂಪ್ರದಾಯ ಬಿಟ್ಟಿದ್ದಾರೆ, ವೈಭವೀಕರಣ ನಡೆಯುತ್ತಿದೆ ಎಂಬ ಆಕ್ಷೇಪದ ನಡುವೆಯೂ ಯಕ್ಷಗಾನ ಇಂದು ಅಬಾಧಿತವಾಗಿ ಮುನ್ನಡೆಯುತ್ತಿದ್ದು, ಹೊರಜಗತ್ತಿಗೂ ಪರಿಚಯಿಸಲ್ಪಟ್ಟಿದೆ. ತಾಳಮದ್ದಳೆ ಕನ್ನಡ ಭಾಷೆ, ಧಾರ್ಮಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರೇಕ್ಷಕ ವರ್ಗ ಅಪೂರ್ವವಾದುದು’ ಎಂದರು.
ಯಕ್ಷಾಂಗಣದ ಗೌರವಾಧ್ಯಕ್ಷ, ಉದ್ಯಮಿ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕೃಷ್ಣಾಭಿವಂದನಂ :
ಸಮಾರಂಭದಲ್ಲಿ ಉದ್ಯಮಿ,ಕಲಾ ಪೋಷಕ ಹಾಗೂ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರಿಗೆ ‘ಕೃಷ್ಣಾಭಿವಂದನಂ’ ಕಾರ್ಯಕ್ರಮದ ಮೂಲಕ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ವನ್ನು ಕುಲಪತಿಗಳು ಪ್ರದಾನ ಮಾಡಿದರು.
ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ ಆಶಯ ನುಡಿಗಳನ್ನಾಡಿದರು. ಉದ್ಯಮಿ ಶ್ರೀಪತಿ ಭಟ್ ಮೂಡಬಿದಿರೆ, ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗ ಚೀಫ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ವಿವಿ ಕಾಲೇಜು ಪ್ರಾಂಶುಪಾಲ ಡಾ. ಉದಯಕುಮಾರ್ ಇರ್ವತ್ತೂರು ಅತಿಥಿಗಳಾಗಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕರುಣಾಕರ ಶೆಟ್ಟಿ ಪಣಿಯೂರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಯಕ್ಷಾಂಗಣ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು.
ಪದಾಧಿಕಾರಿಗಳಾದ ಅಶೋಕ ಮಾಡ ಕುದ್ರಾಡಿಗುತ್ತು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಲ್ಲಿಮಾರು, ಕೆ.ಲಕ್ಷ್ಮಿನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಸುಧಾಕರ ರಾವ್ ಪೇಜಾವರ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.
ಬಳಿಕ ‘ಸಂಧಾನ ಸಪ್ತಕ’ ಸರಣಿಯ ಮೊದಲನೇ ಕಾರ್ಯಕ್ರಮವಾಗಿ ಸತೀಶ್ ಶೆಟ್ಟಿ ಬೋಂದೆಲ್ ಅವರ ಭಾಗವತಿಕೆಯಲ್ಲಿ ‘ಸುಗ್ರೀವ ಸಂಧಾನ’ ತಾಳಮದ್ದಳೆ ನಡೆಯಿತು.
ಕೃಷ್ಣ ಜೆ. ಪಾಲೆಮಾರ್‌ಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ
ಮಾಜಿ ಸಚಿವ, ಕಲಾಪೋಷಕ ಕೃಷ್ಣ ಜೆ. ಪಾಲೆಮಾರ್ ಅವರಿಗೆ ‘ಕೃಷ್ಣಾಭಿವಂದನಂ’- ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ಮಾತನಾಡಿ, ಪ್ರೊ. ಯಡಪಡಿತ್ತಾಯ, ಕೃಷ್ಣ ಪಾಲೆಮಾರ್ ಅವರು ರಾಜಕಾರಣಿಯಾದರೂ ಕಲೆ, ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೃಷ್ಣ ಪಾಲೆಮಾರ್, ಕಳೆದ ೪೦ ವರ್ಷದಿಂದ ಯಕ್ಷಗಾನ ಸಹಿತ ಜಿಲ್ಲೆಯ ಸಾಂಸ್ಕೃತಿಕ ರಂಗಕ್ಕೆ, ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇನೆ. ಇದು ಕಲೆಗೆ ನೀಡುವ ಪ್ರೋತ್ಸಾಹ. ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಯಕ್ಷಾಂಗಣ ಸಂಸ್ಥೆ ಪ್ರತಿವರ್ಷ ತಾಳಮದ್ದಳೆ ಸಪ್ತಾಹ ನಡೆಸುವ ಮೂಲಕ ಕನ್ನಡ ಭಾಷೆಗೆ ಅಪೂರ್ವ ಕೊಡುಗೆ ನೀಡುತ್ತಿದೆ ಎಂದರು.
Comments are closed.